ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ 7 ಮತ್ತು 8ನೇ ಕ್ರಮಾಂಕದ ಬ್ಯಾಟಿಂಗ್ ಬಂದು ಆಕರ್ಷಕ ಅರ್ಧಶತಕ ಸಿಡಿಸಿದ್ದಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಅವರ ತಂದೆ ಎಂ. ಸುಂದರ್ ಮಾತ್ರ ಮಗ ಶತಕ ವಂಚಿತನಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದ 3ನೇ ದಿನದಂದು ವಾಷಿಂಗ್ಟನ್ ಸುಂದರ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು 62 ರನ್ ಗಳಿಸಿದ್ದಲ್ಲದೆ, ಶಾರ್ದೂಲ್ ಠಾಕೂರ್ (67) ಅವರ ಜೊತೆಗೆ 8 ವಿಕೆಟ್ಗೆ 123 ರನ್ಗಳ ಜೊತೆಯಾಟ ನಡೆಸಿ ಆಸ್ಟ್ರೇಲಿಯಾದ ಬೌಲರ್ಗಳನ್ನು ಬೆವರಿಳಿಸಿದ್ದರು.
"ಅವನು (ವಾಷಿಂಗ್ಟನ್ ಸುಂದರ್) ಶತಕ ಸಿಡಿಸಲಾಗದಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಸಿರಾಜ್ ಬಂದಾಗ ಅವನು ಸಿಕ್ಸ್ ಮತ್ತು ಬೌಂಡರಿಗಳನ್ನು ಬಾರಿಸಬೇಕಿತ್ತು. ಆ ಸಾಮರ್ಥ್ಯ ಕೂಡ ಅವನಿಗಿತ್ತು. ಆದರೆ ಹಿನ್ನಡೆಯನ್ನು ಕಡಿಮೆ ಮಾಡಲು ಮತ್ತು ಆಸ್ಟ್ರೇಲಿಯಾ ಟೋಟಲ್ಗೆ ಹತ್ತಿರವಾಗಲು ಯೋಚಿಸಿದ್ದಾನೆ." ಎಂದು ವಾಷಿಂಗ್ಟನ್ ಸುಂದರ್ ತಂದೆ ಎಂ. ಸುಂದರ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ನಾನು ಆಸ್ಟ್ರೇಲಿಯಾದಲ್ಲಿರುವ ಆತನ ಜೊತೆ ಮಾತನಾಡುತ್ತಿದ್ದೆ. ಕಳೆದ ಸಂಜೆ ಮಾತನಾಡುವ ವೇಳೆ ಬ್ಯಾಟಿಂಗ್ಗೆ ಅವಕಾಶ ಸಿಕ್ಕರೆ ದೊಡ್ಡ ಮೊತ್ತ ಗಳಿಸು ಎಂದು ಹೇಳಿದ್ದೆ. ಆತ ಕೂಡ ಖಚಿತವಾಗಿ ರನ್ ಗಳಿಸುತ್ತೇನೆಂದು ಹೇಳಿದ್ದ. ಆದರೆ ಏಕೆ ವಿಫಲನಾದ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದಿದ್ದಾರೆ.
2016-17ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಅಭಿನವ್ ಮುಕುಂದ್ ಜೊತೆ 107 ರನ್ಗಳ ಆರಂಭಿಕ ಜೊತೆಯಾಟ ನಡೆಸಿದ್ದ. ನಂತರ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ತ್ರಿಪುರ ವಿರುದ್ಧ 156 ರನ್ಗಳಿಸಿದ್ದ ಎಂದು ಅವರ ತಂದೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಗಾಯ ಮೀರಿ ಹೋರಾಡುತ್ತಿರುವ ಭಾರತೀಯ ತಂಡದ ಸಾಧನೆಗೆ ಅಖ್ತರ್ ಶಹಬ್ಬಾಸ್‌ಗಿರಿ