ನವದೆಹಲಿ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಅವರ ಅಧಿಕಾರಾವಧಿಯನ್ನು 2025ರ ತನಕ ವಿಸ್ತರಣೆ ಮಾಡಬೇಕು ಎಂದು ಬಿಸಿಸಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಎರಡು ವಾರಗಳ ನಂತರ ನಡೆಸಲು ತೀರ್ಮಾನಿಸಿದೆ.
ಜುಲೈ ತಿಂಗಳಲ್ಲಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಅವರ ಅಧಿಕಾರವಧಿ ಅಂತ್ಯಗೊಳ್ಳಲಿದೆ. ನ್ಯಾಯಮೂರ್ತಿ ಲೋಧಾ ಸಮಿತಿಯ ನಿಯಮದ ಪ್ರಕಾರ ಗಂಗೂಲಿ ಹಾಗೂ ಜಯ್ ಶಾ ಮುಂದಿನ ಮೂರು ವರ್ಷಗಳ ಕಾಲ ಕೂಲಿಂಗ್ ಅವಧಿಯಲ್ಲಿರಬೇಕಾಗುತ್ತದೆ.
ಏಕೆಂದರೆ ಬಿಸಿಸಿಐ ಸಂವಿಧಾನದಲ್ಲಿ 6 ವರ್ಷಗಳು ಕಾರ್ಯ ನಿರ್ವಹಿಸಿದವರು ಮತ್ತೆ 3 ವರ್ಷ ಯಾವುದೇ ಕ್ರಿಕೆಟ್ ಸಂಸ್ಥೆಯ ಹುದ್ದೆಯನ್ನು ಪಡೆಯುವಂತಿಲ್ಲ.
ಬಿಸಿಸಿಐ ತನ್ನ ಹೊಸ ಸಂವಿಧಾನದಲ್ಲಿ ಈ ನಿಯಮವನ್ನು ಪರಿಷ್ಕರಿಸುವಂತೆ ನ್ಯಾಯಾಲಯವನ್ನು ಕೋರಿ ಏಪ್ರಿಲ್ 21ರಂದು ಅರ್ಜಿ ಸಲ್ಲಿಸಿತ್ತು.
ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವುದಕ್ಕೂ ಮುನ್ನ ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ 5 ವರ್ಷಗಳ ಕಾಲ ಕಾರ್ಯದರ್ಶಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜಯ್ ಶಾ ಗುಜರಾತ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯಾಗಿದ್ದರು.
ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಹಾಗೂ ಎಲ್.ನಾಗೇಶ್ವರ್ ರಾವ್ ಒಳಗೊಂಡ ನ್ಯಾಯಪೀಠ ಸದ್ಯ ಈ ಪ್ರಕರಣವನ್ನು ಮುಂದಿನ 2 ವಾರಗಳ ಕಾಲ ಮುಂದೂಡಿದೆ.