ಸಿಡ್ನಿ: ಡಿಸೆಂಬರ್ 17 ರಿಂದ ಅಡಿಲೇಡ್‌ನ ಓವಲ್‌ನಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಸೋಮವಾರ ಮತ್ತೆ ಆಸ್ಟ್ರೇಲಿಯಾ ತಂಡ ಸೇರಿಕೊಳ್ಳಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಅಹರ್ನಿಶಿ ಟೆಸ್ಟ್ ಪಂದ್ಯ:
ಕುಟುಂಬ ಸದಸ್ಯರ ಅನಾರೋಗ್ಯದ ಕಾರಣ ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದ ನಂತರ ಸ್ಟಾರ್ಕ್ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡವನ್ನು ತೊರೆದಿದ್ದರು.
ಆಸೀಸ್ ತಂಡ ಸೇರಿಕೊಂಡ ಮಿಚೆಲ್ ಸ್ಟಾರ್ಕ್:
"ಅಡಿಲೇಡ್ಗೆ ತೆರಳಲು ನಾನು ಸಿದ್ಧನಿದ್ದೇನೆ ಎಂದು ಸ್ಟಾರ್ಕ್ ಹೇಳಿದ್ದಾರೆ. ಆಸ್ಟ್ರೇಲಿಯಾ ಎ ತಂಡದ ಸಹ ಆಟಗಾರರೊಂದಿಗೆ ಸೋಮವಾರ ಸಿಡ್ನಿಯಿಂದ ಹೊರಡಲಿದ್ದಾರೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಸೀನ್ ಅಬಾಟ್, ಜೋ ಬರ್ನ್ಸ್, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್ ಮತ್ತು ಮಿಚ್ ಸ್ವೆಪ್ಸನ್ ಅವರೊಂದಿಗೆ ಭಾರತದ ಆಟಗಾರರು ಸಿಡ್ನಿಯಿಂದ ತೆರಳಲಿರುವ ವಿಮಾನದಲ್ಲಿ ಸ್ಟಾರ್ಕ್ ಕೂಡ ಪ್ರಯಾಣ ಬೆಳೆಸಲಿದ್ದಾರೆ. ಅಹರ್ನಿಶಿ ಟೆಸ್ಟ್ ಪಂದ್ಯಕ್ಕೂ ಮೊದಲು 2 ದಿನಗಳ ಕಾಲ ಅಭ್ಯಾಸ ನಡೆಸಲಿದ್ದಾರೆ.
"ಕಷ್ಟದ ಸಮಯದಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತೇನೆ ಎಂಬ ಸ್ಟಾರ್ಕ್ ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಕುಟುಂಬದ ಜೊತೆ ಸಮಯ ಕಳೆದ ನಂತರ ಮತ್ತೆ ಸೋಮವಾರ ತಂಡ ಸೇರಿಕೊಳ್ಳುತ್ತಿರುವ ಸ್ಟಾರ್ಕ್ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ" ಎಂದು ಆಸ್ಟ್ರೇಲಿಯಾದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಸ್ಟಾರ್ಕ್, ಈವರೆಗೂ ಆಡಿದ ಏಳು ಪಂದ್ಯಗಳಲ್ಲಿ 42 ವಿಕೆಟ್ ಪಡೆದಿದ್ದಾರೆ.