ಕೊಲಂಬೊ: 2011ರಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು ಎಂದು ಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ್ ಅಲುತ್‌ಗಮಾ ಆರೋಪಿಸಿದ್ದು, ಇದೀಗ ಅಲ್ಲಿನ ಸರ್ಕಾರ ಇದರ ತನಿಖೆ ನಡೆಸಲು ಆದೇಶ ನೀಡಿದೆ.
ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು. ಇದರಲ್ಲಿ ಯಾವುದೇ ಕ್ರಿಕೆಟರ್ಸ್ ಭಾಗಿಯಾಗಿರಲಿಲ್ಲ. ಬದಲಾಗಿ ಬೇರೆ ಪಕ್ಷಗಳು ಶಾಮೀಲಾಗಿದ್ದವು ಎಂದಿದ್ದ ಅವರು, ಆ ಪಂದ್ಯವನ್ನ ಮಾರಾಟ ಮಾಡಲಾಗಿತ್ತು ಎಂದು ಸ್ಥಳೀಯ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದೀಗ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಸಮಗ್ರ ತನಿಖೆ ನಡೆಸಲು ಆದೇಶ ಹೊರಹಾಕಿದೆ. ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಕೆ.ಎ.ಡಿ.ಎಸ್ ರುವಾನಚಂದ್ರ ತನಿಖೆ ನಡೆಸಲು ಆದೇಶ ಹೊರಡಿಸಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಕ್ರೀಡಾ ಸಚಿವ ಅಲುತ್‌ಗಮಾ ಹಾಗೂ ಅಂದಿನ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಇಬ್ಬರೂ ಆಹ್ವಾನಿತರಾಗಿದ್ದರು. ಇವರ ಆರೋಪಕ್ಕೆ ಈಗಾಗಲೇ ಅಂದಿನ ಶ್ರೀಲಂಕಾ ತಂಡದ ಕ್ಯಾಪ್ಟನ್ ಕುಮಾರ್ ಸಂಗಕ್ಕಾರ್ ಮತ್ತು ವಿಕೆಟ್ ಕೀಪರ್ ಮಹೇಲ್ ಜಯವರ್ದನೆ ತಳ್ಳಿ ಹಾಕಿದ್ದು, ಸಾಕ್ಷ್ಯಾಧಾರಗಳಿದ್ದರೆ ತೋರಿಸಿ ಎಂದಿದ್ದಾರೆ. ಈ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 275 ರನ್ಗಳ ಗುರಿಯನ್ನ ಭಾರತ ಸುಲಭವಾಗಿ ಗಳಿಸುವ ಮೂಲಕ ವಿಶ್ವಕಪ್ ಎತ್ತಿ ಹಿಡಿದು, ಹೊಸ ಇತಿಹಾಸ ಬರೆದಿತ್ತು.