ಮುಂಬೈ: ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಹೇರಲಾಗಿದ್ದ ಆಜೀವ ನಿಷೇಧ ಶಿಕ್ಷೆಯನ್ನ ತೆರವುಗೊಳಿಸಿದ ಬಿಸಿಸಿಐಗೆ ಎಸ್. ಶ್ರೀಶಾಂತ್ ಧನ್ಯವಾದ ತಿಳಿಸಿದ್ದಾರೆ.
ಮುಂದಿನ ವರ್ಷ ನಿಷೇಧದ ಅವಧಿ ಕೊನೆಗೊಳ್ಳುವುದರಿಂದ ಶ್ರೀಶಾಂತ್ ಮತ್ತೆ ಕ್ರಿಕೆಟ್ ಅಂಗಳಕ್ಕೆ ಕಾಲಿಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐನಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿ, ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆಯುವುದು ನನ್ನ ಗುರಿ ಎಂದು ಶ್ರೀಶಾಂತ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಕಷ್ಟದ ಸಮಯದಲ್ಲಿ ತನ್ನ ನೆರವಿಗೆ ನಿಂತ ಕೇರಳ ಕ್ರಿಕೆಟ್ ಅಕಾಡೆಮಿ, ಕೇರಳ ಜನತೆ, ಹಾಗೂ ತಮ್ಮ ಪರವಾಗಿ ತೀರ್ಪು ನೀಡಿರುವ ಸುಪ್ರಿಂಕೋರ್ಟ್ ಹಾಗೂ ಒಂಬುಡ್ಸ್ಮನ್ ಡಿಕೆ ಜೈನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಶ್ರೀಶಾಂತ್.
ನನಗೆ ಕಲೆಯಲ್ಲಿ ಆಸಕ್ತಿಯಿದ್ದುದರಿಂದ ನಾನು ಸಿನಿಮಾದಲ್ಲಿ ತೊಡಗಿಕೊಂಡಿದ್ದೆ. ಇದೀಗ ಕ್ರಿಕೆಟ್ ಆಡುವುದಕ್ಕೆ ಅವಕಾಶ ಸಿಕ್ಕಿರುವುದರಿಂದ ಮತ್ತೆ ನಾನು ಸಿನಿಮಾಗಿಂತ ಕ್ರಿಕೆಟ್ಗೆ ಮೊದಲ ಆದ್ಯತೆ ನೀಡುತ್ತೇನೆ. ಕಠಿಣ ಅಭ್ಯಾಸ ನಡೆಸಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡುತ್ತೇನೆ ಎಂದು ಶ್ರೀಶಾಂತ್ ಸಂತೋಷ ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ಭಾರತ ತಂಡದ ಪರ 27 ಟೆಸ್ಟ್ ಪಂದ್ಯದಲ್ಲಿ 87 ವಿಕೆಟ್, 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್ ಹಾಗೂ 10 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ.