ಕೋಲ್ಕತ್ತಾ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬಿಸಿಸಿಐ ಅಧ್ಯಕ್ಷ ನಾಯಕ ಸೌರವ್ ಗಂಗೂಲಿ ಅವರು ರಾಜಕೀಯಕ್ಕೆ ಸೇರಲು ಒತ್ತಡದಲ್ಲಿದ್ದಾರೆ ಎಂಬ ಸಿಪಿಐ ಹಿರಿಯ ಮುಖಂಡ ಅಶೋಕ್ ಭಟ್ಟಾಚಾರ್ಯ ಹೇಳಿಕೆ ಬಿರುಗಾಳಿ ಎಬ್ಬಿಸಿದೆ.
ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಗಂಗೂಲಿ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ ರಾಜಕೀಯಕ್ಕೆ ಬರುವ ಬಗ್ಗೆ ಗಂಗೂಲಿ ತಮ್ಮ ಉದ್ದೇಶಗಳನ್ನು ಎಂದಿಗೂ ಸ್ಪಷ್ಟಪಡಿಸಿರಲಿಲ್ಲ.
'ಕೆಲವರು ಗಂಗೂಲಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಯಸಿದ್ದರು. ಬಹುಶಃ ಅದು ಅವರ ಮೇಲೆ ಒತ್ತಡ ಹೇರಿದೆ. ಅವರು ರಾಜಕೀಯ ವ್ಯಕ್ತಿಯಲ್ಲ, ಸೌರವ್ ಎಂದಿಗೂ ಕ್ರೀಡಾ ಐಕಾನ್' ಎಂದು ದೀರ್ಘಕಾಲದಿಂದ ಗಂಗೂಲಿ ಕುಟುಂಬದ ಜೊತೆ ಒಡನಾಟ ಹೊಂದಿರುವ ಅಶೋಕ್ ಭಟ್ಟಾಚಾರ್ಯ ಹೇಳಿದ್ದಾರೆ.
ಓದಿ ಟೀಂ ಇಂಡಿಯಾಕ್ಕೆ ಬಿಗ್ ರಿಲೀಫ್.. ಎಲ್ಲ ಆಟಗಾರರ ಕೋವಿಡ್ ವರದಿ ನೆಗೆಟಿವ್!
'ರಾಜಕೀಯಕ್ಕೆ ಸೇರಲು ನಾವು ಅವರ ಮೇಲೆ ಒತ್ತಡವನ್ನು ಸೃಷ್ಟಿಸಬಾರದು. ರಾಜಕೀಯಕ್ಕೆ ಬರಬೇಡಿ ಎಂದು ಕಳೆದ ವಾರ ಸೌರವ್‌ಗೆ ಹೇಳಿದ್ದೆ, ಅವರು ನನ್ನ ಅಭಿಪ್ರಾಯಗಳನ್ನು ವಿರೋಧಿಸಿರಲಿಲ್ಲ' ಎಂದು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಭಟ್ಟಾಚಾರ್ಯ ಹೇಳಿದ್ದಾರೆ.
ಮಾಜಿ ಸಚಿವರ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್, 'ಕೆಲವರು ತಮ್ಮ ಕೆಟ್ಟ ಮನಸ್ಥಿತಿಯಿಂದಾಗಿ ಎಲ್ಲದರಲ್ಲೂ ರಾಜಕೀಯವನ್ನು ನೋಡುತ್ತಾರೆ. ಅವರ ಲಕ್ಷಾಂತರ ಅಭಿಮಾನಿಗಳಂತೆ, ಸೌರವ್ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ' ಎಂದಿದ್ದಾರೆ.