ಲಾಹೋರ್: ಸೌರವ್ ಗಂಗೂಲಿ ಅವರಿಗಿಂತ ಉತ್ತಮ ನಾಯಕನನ್ನು ಭಾರತ ಇದುವರೆಗೆ ಕಂಡಿಲ್ಲ ಎಂದು ಹೇಳಿದ್ದ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಇದೀಗ ಮತ್ತೊಂದು ಹೇಳಿಕೆ ನೀಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನ ಹಾಡಿ ಹೊಗಳಿದ್ದಾರೆ.
ಹೊಸ ಬಾಲ್ನೊಂದಿಗೆ ನಾನು ಬೌಲಿಂಗ್ ಮಾಡಲು ಕಣಕ್ಕಿಳಿದಾಗ ಸೌರವ್ ಗಂಗೂಲಿ ಮಾತ್ರ ಆರಂಭಿಕರಾಗಿ ನನ್ನ ಬೌಲಿಂಗ್ ಶಕ್ತಿ ಎದುರಿಸುವ ಸಾಮರ್ಥ್ಯ ಹೊಂದಿದ್ದರು ಎಂದು ರಾವಲ್ಪಿಂಡಿ ಎಕ್ಸ್ಪ್ರೆಸ್ ಹೇಳಿಕೆ ನೀಡಿದ್ದಾರೆ.
ಗಂಗೂಲಿ ನನ್ನ ಬೌಲಿಂಗ್ ಶಕ್ತಿ ಎದುರಿಸಲು ಹೆದರುತ್ತಿದ್ದರು ಎಂದು ಅನೇಕರು ಹೇಳಿಕೊಂಡಿದರು. ಆದರೆ ಅದು ಸುಳ್ಳು. ನನ್ನ ಬೌಲಿಂಗ್ ಎದುರಿಸುವಲ್ಲಿ ಗಂಗೂಲಿ ಅತ್ಯಂತ ಧೈರ್ಯಶಾಲಿ ಬ್ಯಾಟ್ಸ್ಮನ್. ಹೊಸ ಚೆಂಡಿನೊಂದಿಗೆ ಅವರು ನನ್ನನ್ನು ಸುಲಭವಾಗಿ ಎದುರಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಮೈದಾನದಲ್ಲಿ ನಾನು ಅವರ ಎದೆಯ ಮೇಲೆ ಬೌಲಿಂಗ್ ಮಾಡುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಎಂದಿಗೂ ಹಿಂದೆ ಸರಿಯುತ್ತಿರಲಿಲ್ಲ. ಸುಲಭವಾಗಿ ರನ್ ಗಳಿಸುತ್ತಿದ್ದರು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಗಂಗೂಲಿ 113 ಟೆಸ್ಟ್, 311 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 7,212 ಹಾಗೂ 11,363 ರನ್ ಗಳಿಸಿದ್ದಾರೆ. ಇನ್ನು ಶೊಯೇಬ್ ಅಖ್ತರ್ 46 ಟೆಸ್ಟ್, 163 ಏಕದಿನ, ಮತ್ತು 15 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 178, 247 ಮತ್ತು 19 ವಿಕೆಟ್ ಪಡೆದಿದ್ದಾರೆ.