ಕೋಲ್ಕತಾ : ಲಘು ಹೃದಯಾಘಾತದ ನಂತರ ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ಬಿಸಿಸಿಐ ಅಧ್ಯಕ್ಷ ಮತ್ತು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಆರೋಗ್ಯ ಸ್ಥಿರವಾಗಿದ್ದಾರೆ ಮತ್ತು ಅವರ ಆರೋಗ್ಯ ಉತ್ತಮವಾಗಿದೆ ಎಂದು ವೈದ್ಯರು ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ.
ಅವರ ಹೃದಯದಲ್ಲಿ ಎರಡು ಅಡೆತಡೆಗಳಿದ್ದು, ಒಂದರಲ್ಲಿ ಸ್ಟಂಟ್ ಸೇರಿಸಲಾಗಿದೆ. ಅವರು ಈಗ ನಿದ್ರಿಸುತ್ತಿದ್ದಾರೆ ಎಂದು ಬೆಳಗ್ಗೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ. ಗಂಗೂಲಿಯವರ ರಕ್ತದೊತ್ತಡ 110/70 ಮತ್ತು ಆಮ್ಲಜನಕದ ಶುದ್ಧತ್ವ ಮಟ್ಟವು ಶೇ.98 ಆಗಿದೆ ಎಂದು ಹೇಳಿದೆ.
ಗಂಗೂಲಿ ಅವರ ಆರೋಗ್ಯದ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಿದ ನಂತರ ಮತ್ತೊಂದು ಆಂಜಿಯೋಪ್ಲಾಸ್ಟಿ ನಡೆಸಲು ನಿರ್ಧರಿಸುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ.
"ಟ್ರಿಪಲ್ ವೆಸಲ್ ಡಿಸೀಸ್(triple vessel disease)ನಿಂದಾಗಿ ಅವರಿಗೆ ಮತ್ತೊಂದು ಆಂಜಿಯೋಪ್ಲಾಸ್ಟಿ ಅಗತ್ಯವಿರುತ್ತದೆ. ಆದರೆ, ಅದು ಅವರ ಸ್ಥಿತಿ ಹೇಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ಅವರು ಈಗ ಅಪಾಯದಿಂದ ಪಾರಾಗಿದ್ದಾರೆ" ಎಂದು ಗಂಗೂಲಿಗೆ ಚಿಕಿತ್ಸೆ ನೀಡುವ ವೈದ್ಯರೊಬ್ಬರು ಹೇಳಿದ್ದಾರೆ.