ನಾಗ್ಪುರ: ಭಾನುವಾರ ನಡೆದ ಬಾಂಗ್ಲಾದೇಶದ ವಿರುದ್ಧದ ಟಿ20 ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ 7 ರನ್ ನೀಡಿ 6 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ ದೀಪಕ್ ಚಹಾರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಡುವ ಮುನ್ನ ನಡೆದ ಕೌತುಕದ ಘಟನೆ ಇಲ್ಲಿದೆ.
ದೀಪಕ್ ಚಹಾರ್ ಅದೃಷ್ಟ ಸರಿಯಿದ್ದಿದ್ರೆ ಬಹಳ ವರ್ಷಗಳ ಹಿಂದೆಯೇ ಭಾರತ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದರು. ಆದ್ರೆ ಸಾಮರ್ಥ್ಯದ ಜೊತೆಗೆ ಅದೃಷ್ಟ ಕೈಗೂಡದ್ದರಿಂದ ಕೆಲವು ವರ್ಷಗಳ ವನವಾಸ ಅನುಭವಿಸಬೇಕಾಯಿತು. ಇದೀಗ ಬೌಲಿಂಗ್ ಸಾಮರ್ಥ್ಯದಿಂದಲೇ ಭಾರತೀಯರ ಮನೆಮಾತಾಗಿದ್ದಾರೆ.
2008ರಲ್ಲಿ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ನಿರ್ದೇಶಕರಾಗಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ಹಾಗೂ ಭಾರತ ತಂಡದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಚಹಾರ್ರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌಲಿಂಗ್ ಮಾಡುವಷ್ಟು ಸಾಮರ್ಥ್ಯವಿಲ್ಲ ಎಂದು ಭಾವಿಸಿ ಆತನಿಗೆ ರಾಜಸ್ಥಾನ ತಂಡದಲ್ಲಿ ಅವಕಾಶವಿಲ್ಲದಂತೆ ಮಾಡಿದ್ದರಂತೆ. ಆದ್ರೆ ಚಹಾರ್ 2 ವರ್ಷದ ನಂತರ ರಾಜಸ್ಥಾನ ತಂಡದ ಪರ ರಣಜಿಗೆ ಪಾದಾರ್ಪಣೆ ಮಾಡಿ ಹೈದರಾಬಾದ್ ವಿರುದ್ಧ 8 ವಿಕೆಟ್ ಪಡೆದು ಚಾಪೆಲ್ ಟೀಕೆಗೆ ತಕ್ಕ ಉತ್ತರ ನೀಡಿದ್ದರು.
ನಂತರ ಗಾಯದ ಸಮಸ್ಯೆಯಿಂದ ಬಳಲಿ ತಂಡದಿಂದ ಹೊರಬಿದ್ದರೂ ಚಹಾರ್ ಛಲಬಿಡದೆ ಮತ್ತೆ ರಾಜಸ್ಥಾನದ ಖಾಯಂ ಆಟಗಾರನಾದರು. ದೇಶಿ ಟಿ20 ಲೀಗ್ ಆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಐಪಿಎಲ್ ಪ್ರಾಂಚೈಸಿಗಳ ಗಮನ ಸೆಳೆದರು.
80 ಲಕ್ಷಕ್ಕೆ ಸಿಎಸ್ಕೆ ತೆಕ್ಕೆಗೆ ಸೇರಿ ಅದೃಷ್ಟ ಬದಲಾಯಸಿಕೊಂಡ ಚಹಾರ್:
ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಗಮನ ಸೆಳೆದಿದ್ದರಿಂದ ಸಿಎಸ್ಕೆ 80 ಲಕ್ಷಕ್ಕೆ ಚಹಾರ್ರನ್ನು ಖರೀದಿಸಿತ್ತು. ಅಲ್ಲಿ ನಾಯಕರಾಗಿದ್ದ ಧೋನಿ ನಿಜಕ್ಕೂ ಚಹಾರ್ ಪಾಲಿಗೆ ಗಾಡ್ ಫಾದರ್ ಆದ್ರು.
ಚಹಾರ್ ಬೌಲಿಂಗ್ ಶೈಲಿ ಗಮನಿಸಿದ ಧೋನಿ ಆತನನ್ನು ಓಪನಿಂಗ್ ಬೌಲಿಂಗ್ಗೆ ಸಿದ್ಧಪಡಿಸಿದರು. ಸ್ವಿಂಗ್ ಬೌಲಿಂಗ್ನಲ್ಲಿ ಕೌಶಲ್ಯವಿರುವ ಚಹಾರ್ 2018ರ ಸೀಸನ್ನಲ್ಲಿ 10 ವಿಕೆಟ್ ಪಡೆದು ಚಾಂಪಿಯನ್ ತಂಡದ ಭಾಗವಾದರು. ನಂತರ 2019ರ ಸೀಸನ್ನಲ್ಲೂ 22 ವಿಕೆಟ್ ಪಡೆದರಲ್ಲದೆ ಭಾರತ ಟಿ20 ತಂಡದ ಖಾಯಂ ಬೌಲರ್ ಆಗಿ ಆಯ್ಕೆಯಾಗಿದ್ದಾರೆ.
- " class="align-text-top noRightClick twitterSection" data="">
ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ 9 ಎಕಾನಮಿಯಲ್ಲಿ ಬೌಲಿಂಗ್ನಲ್ಲಿ ಮಾಡಿ ಟೀಕೆಗೊಳಗಾದ ಚಹಾರ್ ನಂತರ ತಮ್ಮ ಬೌಲಿಂಗ್ನಲ್ಲಿ ಕೆಲವು ಬದಲಾವಣೆ ತಂದುಕೊಂಡಿದ್ದಾರೆ. ಇದೀಗ ಬಾಂಗ್ಲಾದೇಶದ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ಗೆಲ್ಲಿಸಿಕೊಟ್ಟ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ.