ನಾಗ್ಪುರ್: ಪ್ರವಾಸಿ ಬಾಂಗ್ಲಾದೇಶದ ವಿರುದ್ಧದ ಟಿ-20 ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದ್ದು, ಮುಂದಿನ ವಿಶ್ವಕಪ್ ಟೂರ್ನಿಗೂ ಮುಂಚಿತವಾಗಿ ತಂಡದಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಳವಾಗಿದೆ.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ನೀಡಿದ್ದ 174ರನ್ ಬೆನ್ನತ್ತಿದ್ದ ವೇಳೆ ಎದುರಾಳಿ ತಂಡ ಬೇಗ ವಿಕೆಟ್ ಕಳೆದುಕೊಂಡ್ರು ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ನಯೀಮ್ ಹಾಗೂ ಮಿಥುನ್ ಜೊತೆ ಸೇರಿ ತಂಡವನ್ನ ಗೆಲುವಿನ ದಡ ಸೇರಿಸುವ ಭರವಸೆ ನೀಡಿದ್ದರು. ಈ ವೇಳೆ, ಟೀಂ ಇಂಡಿಯಾ ಪಾಳಯದಲ್ಲಿ ಸ್ವಲ್ಪ ಮಟ್ಟದ ಒತ್ತಡ ಉಂಟಾಗಿ, ಸರಣಿಯಲ್ಲಿ ಸೋಲು ಕಾಣಲಿದ್ದೇವೆ ಎಂದು ಎಲ್ಲರೂ ಅಂದು ಕೊಂಡಿದ್ದರು.
ಬಾಂಗ್ಲಾ ತಂಡ 12.5 ಓವರ್ಗಳಲ್ಲಿ 110ರನ್ಗಳಿಕೆ ಮಾಡಿದ್ದರಿಂದ ಮುಂದಿನ 7 ಓವರ್ಗಳಲ್ಲಿ ತಂಡಕ್ಕೆ ಬೇಕಾಗಿದ್ದು, ಕೇವಲ 64ರನ್. ಹೀಗಾಗಿ ಒತ್ತಡಕ್ಕೊಳಗಾಗಿದ್ದ ಟೀಂ ಇಂಡಿಯಾಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಪ್ರೇರಣೆ ನೀಡಿ, ಒತ್ತಡದಿಂದ ಹೊರಬರುವಂತೆ ಪ್ರೋತ್ಸಾಹ ನೀಡಿದ್ದರು. ಇದೀಗ ಈ ವಿಷಯವನ್ನ ತಂಡದ ಸಹ ಆಟಗಾರ ಶ್ರೇಯಸ್ ಅಯ್ಯರ್ ಹೇಳಿಕೊಂಡಿದ್ದಾರೆ.
ಹೇಳಿದ್ದೇನು!? ಪಂದ್ಯದಲ್ಲಿ ನಾವು ಒತ್ತಡಕ್ಕೆ ಒಳಗಾಗಿ ಆಡುತ್ತಿರುವುದರಿಂದ ಅದರ ಸದುಪಯೋಗವನ್ನ ಎದುರಾಳಿ ತಂಡ ಪಡೆದುಕೊಳ್ಳುತ್ತಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಅವರು ಚೆನ್ನಾಗಿ ಕ್ರಿಕೆಟ್ ಆಡಿದ್ದಾರೆ. ಆದರೆ ಇದೀಗ ಉತ್ತಮವಾದ ಪ್ರದರ್ಶನ ನೀಡುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಚಿಕ್ಕದಾಗಿ ಹೇಳಿದ್ದರು. ಅದರ ಫಲವಾಗಿ ನಾವು ಪಂದ್ಯದಲ್ಲಿ ಗೆಲುವು ಸಾಧಿಸಲು ಸಹಕಾರಿ ಆಯ್ತು ಎಂದಿದ್ದಾರೆ.