ತಿರುವನಂತಪುರ: ವೆಸ್ಟ್ ಇಂಡೀಸ್ ವಿರುದ್ಧ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ತನ್ನ ಅದ್ಭುತ ಪ್ರದರ್ಶನಕ್ಕೆ ರೋಹಿತ್ ಶರ್ಮಾ ನೀಡಿದ ಸ್ಫೂರ್ತಿದಾಯಕ ಮಾತುಗಳೇ ಕಾರಣವೆಂದು ಎಂದು ಶಿವಂ ದುಬೆ ತಿಳಿಸಿದ್ದಾರೆ.
ಯಾರೇ ಆಗಲಿ ರಾಷ್ಟ್ರೀಯ ತಂಡದ ಪರ ಬ್ಯಾಟಿಂಗ್ ಮಾಡುವಾಗ ಹಿಂಜರಿಕೆ ಇದ್ದೇ ಇರುತ್ತದೆ. ಮೊದಲು 3ನೇ ಕ್ರಮಾಂಕಕ್ಕೆ ಬ್ಯಾಟಿಂಗ್ ಬಂದ ನಂತರ ನಾನೂ ಒತ್ತಡಕ್ಕೆ ಒಳಗಾಗಿದ್ದೆ. ಆದರೆ ರೋಹಿತ್ ಶರ್ಮಾ ನನಗೆ ಧೈರ್ಯ ತುಂಬಿದರು. ತಾಳ್ಮೆಯಿಂದ ಬ್ಯಾಟಿಂಗ್ ಮಾಡು, ನಿನ್ನ ಶಕ್ತಿ ಏನೆಂಬುದು ನಿನಗೆ ಗೊತ್ತಿದೆ ಎಂದು ನನ್ನಲ್ಲಿ ಸ್ಫೂರ್ತಿ ತುಂಬಿದರು ಎಂದು ಶಿವಂ ದುಬೆ ಹೇಳಿದ್ದಾರೆ.
ಹಿರಿಯ ಆಟಗಾರರು ನನ್ನಂತಹ ಹೊಸಬರಿಗೆ ನೀಡುವ ಮಾರ್ಗದರ್ಶನದಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ. ಇದರಿಂದಾಗಿಯೇ ರೋಹಿತ್ ಜೊತೆ ಮಾತನಾಡಿದ ನಂತರದ ಎಸೆತವನ್ನೇ ಸಿಕ್ಸರ್ಗಟ್ಟಿದೆ. ಆದರೆ ಫಲಿತಾಂಶ ನಮ್ಮ ವಿರುದ್ಧವಾಗಿದ್ದರಿಂದ ಬೇಸರ ತರಿಸಿದೆ. ಖಂಡಿತ ಮುಂದಿನ ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳುತ್ತೇವೆ ಎಂದು ದುಬೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲಿ ಶಿವಂ ದುಬೆ 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 54 ರನ್ ಗಳಿಸಿದ್ದರು. ಆದರೆ ಭಾರತ ನೀಡಿದ್ದ 171 ರನ್ಗಳ ಗುರಿಯನ್ನು ವಿಂಡೀಸ್ ಯಶಸ್ವಿಯಾಗಿ ಚೇಸ್ ಮಾಡಿ ಗೆಲುವು ಸಾಧಿಸಿತ್ತು.