ಮ್ಯಾಂಚೆಸ್ಟರ್: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಶಾನನ್ ಗೇಬ್ರಿಯಲ್ ಅವರನ್ನು ವೆಸ್ಟ್ ಇಂಡೀಸ್‌ನ ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಗುರುವಾರ ತಿಳಿಸಿದೆ.
ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡ ಬಳಿಕ ಓಲ್ಡ್ ಟ್ರ್ಯಾಫೋರ್ಡ್ನಲ್ಲಿ ನಡೆದ ಎರಡು ಇಂಟರ್ ಸ್ಕ್ಯಾಡ್ ಅಭ್ಯಾಸ ಪಂದ್ಯಗಳಲ್ಲಿ ಶಾನನ್ ಅದ್ಭುತ ಪ್ರದರ್ಶನ ತೋರುವ ಮೂಲಕ ಅವರ ಫಿಟ್ನೆಸ್ ಸಾಬೀತು ಪಡಿಸಿದ್ದಾರೆ. ಹೀಗಾಗಿ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಡಬ್ಲ್ಯುಐ ಲೀಡ್ ಸೆಲೆಕ್ಟರ್ ರೋಜರ್ ಹಾರ್ಪರ್, ಶಾನನ್ ಗೇಬ್ರಿಯಲ್ ತಂಡಕ್ಕೆ ಸೇರ್ಪಡೆಯಾಗಿದ್ದಕ್ಕೆ ಸಂತೋಷವಾಗಿದೆ. ಅವರು ಫಿಟ್ ಆಗಿದ್ದಾರೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಅವರು ಬಲ ತುಂಬಲಿದ್ದಾರೆ ಎಂದು ಹೇಳಿದ್ದಾರೆ.
32 ವರ್ಷದ ಶಾನನ್, 17 ಮೇ 2012 ರಂದು ಲಾರ್ಡ್ಸ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು. ಇದುವರೆಗೆ ಅವರು 45 ಪಂದ್ಯಗಳನ್ನು ಆಡಿದ್ದು, 133 ವಿಕೆಟ್ ಪಡೆದಿದ್ದಾರೆ. ವಿಂಡೀಸ್‌ನ ಸಾರ್ವಕಾಲಿಕ ಟೆಸ್ಟ್ ಪಂದ್ಯದ ವಿಕೆಟ್ ಪಡೆದವರ ಪಟ್ಟಿಯಲ್ಲಿ 15 ನೇ ಸ್ಥಾನದಲ್ಲಿದ್ದಾರೆ.