ಕರಾಚಿ: ಶ್ರೀಲಂಕಾ ವಿರುದ್ಧ ಎರಡನೇ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಬಾಬರ್ ಅಜಂ ಪಾಕಿಸ್ತಾನದ ಪರ 2ನೇ ದ್ವಿಶತಕ ಸಿಡಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಭವಿಷ್ಯ ನುಡಿದಿದ್ದಾರೆ.
ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡ ಏಕದಿನ ಸರಣಿ ಜಯಿಸದ ನಂತರ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿರುವ ಅಫ್ರಿದಿ, ಮುಂದಿನ ದಿನಗಳಲ್ಲಿ ಬಾಬರ್ ಖಂಡಿತ ಫಾಖರ್ ಝಮಾನ್ ರಂತೆ ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಲು ಅರ್ಹರಾಗಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.
"ಬಾಬರ್ ನೀನು ಯಾವಾಗಲು ಸುದೀರ್ಘ ಇನ್ನಿಂಗ್ಸ್ ಆಡಬೇಕೆಂದು ನಾನು ಬಯಸುತ್ತೇನೆ. ನೀನೊಬ್ಬ 50 ರನ್ಗಳಿಸುವ ಆಟಗಾರನಲ್ಲ. ನಿನ್ನಿಂದ 100,150 ಅಥವಾ 200 ರನ್ಗಳಿಸುವ ಸಾಮರ್ಥ್ಯವಿದೆ. ನೀನು ಪಾಕಿಸ್ತಾನ ತಂಡದ ಬೆನ್ನೆಲುಬಿದ್ದಂತೆ" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಬಾಬರ್ ತಮ್ಮ 11 ನೇ ಶತಕ ಸಿಡಿಸುವ ಮೂಲಕ ವೇಗವಾಗಿ ಏಕದಿನ ಕ್ರಿಕೆಟ್ನಲ್ಲಿ 11 ಶತಕ ಸಿಡಿಸಿ ಕೊಹ್ಲಿ ಹಿಂದಿಕ್ಕಿದ್ದರು. ಕೊಹ್ಲಿ ಈ ಸಾಧನೆಗಾಗಿ 82 ಇನ್ನಿಂಗ್ಸ್ ತೆಗೆದುಕೊಂಡರೆ, ಬಾಬರ್ 71 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ, ಡಿಕಾಕ್ 64 ಹಾಗೂ 65 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.