ನವದೆಹಲಿ: ಅಫ್ಘಾನಿಸ್ತಾನ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಶಫೀಕುಲ್ಲಾ ಶಫೀಕ್ ಎಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆ 6 ವರ್ಷ ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಿದ್ದಾರೆ.
2018ರ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಟಿ-20ಯ ಉದ್ಘಾಟನಾ ಆವೃತ್ತಿ ಮತ್ತು 2019 ರ ಬಿಪಿಎಲ್ ಆವೃತ್ತಿಯ ಸಂದರ್ಭದಲ್ಲಿ ಶಫೀಕ್ ಎಸಿಬಿ ಭ್ರಷ್ಟಾಚಾರ ನಿಗ್ರಹದ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ತಮ್ಮ ಮೇಲಿದ್ದ ನಾಲ್ಕು ಅರೋಪಗಳನ್ನು ಅವರೇ ಒಪ್ಪಿಕೊಂಡ ಮೇಲೆ ಎಸಿಬಿ ಅವರಿಗೆ 6 ವರ್ಷಗಳ ಕಾಲ ಎಲ್ಲ ಮಾದರಿ ಕ್ರಿಕೆಟ್ನಿಂದ ನಿಷೇಧ ಹೇರಿದೆ.
ಶಫೀಕುಲ್ಲಾ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಮೂಲಕ ಎಸಿಬಿಯ 2.1.1 ನಿಯಮ ಉಲ್ಲಂಘನೆ, ಫಿಕ್ಸ್ ಮಾಡಿಕೊಂಡು ಅದರಿಂದ ಹಣ ಪಡೆಯುವ ಮೂಲಕ 2.1.3 ನಿಯಮ ಉಲ್ಲಂಘನೆ ಹಾಗೂ ಭ್ರಷ್ಟಾಚಾರಕ್ಕೆ ಒತ್ತಡ ಬಂದ ವಿಷಯವನ್ನು ಕ್ರಿಕೆಟ್ ಮಂಡಳಿಯ ಗಮನಕ್ಕೆ ತಾರದೇ ಇರುವುದಕ್ಕೆ ಎರಡು ಆರೋಪ ದಾಖಲಾಗಿದೆ.
30 ವರ್ಷದ ಶಫೀಕ್ 24 ಏಕದಿನ 46 ಟಿ -20, ಪಂದ್ಯಗಳನ್ನಾಡಿದ್ದಾರೆ. ಇವರು ಕೊನೆಯ ಬಾರಿಗೆ 2019 ಸೆಪ್ಟಂಬರ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಿದ್ದರು.