ಸಿಡ್ನಿ(ಆಸ್ಟ್ರೇಲಿಯಾ): ಟಿ-20 ವಿಶ್ವಕಪ್ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ವಿಶ್ವದೆಲ್ಲೇ ಮಾತಾಗಿರುವ 16 ವರ್ಷದ ಶಫಾಲಿ ವರ್ಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ನಾಯಕಿ ಹರ್ಮನ್ಪ್ರೀತ್ ಕೌರ್, "ಅವಳ ತುಂಟತನ ತಂಡದಲ್ಲಿ ಅಪಾರ ಸಂತಸ ಹಾಗೂ ಸಕಾರಾತ್ಮಕ ಭಾವನೆ ಹೆಚ್ಚಿಸಿದೆ ಎಂದಿದ್ದಾರೆ.
ಗುರಾವಾರ ನಡೆಯಲಿರುವ ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಆಟಗಾರ್ತಿಯ ಆಗಮನದಿಂದ ಭಾರತ ತಂಡದಲ್ಲಿ ಅಪಾರ ಬದಲಾವಣೆ ಹಾಗೂ ಧನಾತ್ಮಕ ಚಿಂತೆನೆ ಹೆಚ್ಚಾಗಿದೆ. ಲೀಗ್ನಲ್ಲಿ ನೀಡಿದ ಪ್ರದರ್ಶನವನ್ನೇ ಸೆಮಿಫೈನಲ್ನಲ್ಲೂ ನೀಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
"ಅವಳು(ಶಫಾಲಿ) ತುಂಬಾ ತುಂಟಿ. ಆ ತುಂಟತನವೇ ತಂಡಕ್ಕೆ ಅಪಾರ ಖುಷಿ ಹಾಗೂ ಸಕರಾತ್ಮಕತೆ ಭಾವನೆ ತಂದುಕೊಟ್ಟಿದೆ. ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಾಳೆ. ಅವಳ ಜೊತೆ ಬ್ಯಾಟಿಂಗ್ ಮಾಡಿದರೆ, ನಿಮ್ಮನ್ನು ಪ್ರೇರೇಪಿಸುವ ಮೂಲಕ ಒತ್ತಡವಿಲ್ಲದಂತೆ ಮಾಡುತ್ತಾಳೆ. ಈ ರೀತಿಯ ಒಬ್ಬ ಆಟಗಾರ್ತಿ ನಿಮ್ಮ ತಂಡಕ್ಕೆ ಅಗತ್ಯವಿರುತ್ತದೆ. ಯಾರಾದರೂ ದೇಶಕ್ಕೋಸ್ಕರ ಆಡುವಾಗ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾರೆ. ಶಫಾಲಿ ಕೂಡ ತಂಡಕ್ಕಾಗಿ ಸಂತೋಷದಿಂದ ಆಡುತ್ತಾಳೆ" ಎಂದು ಯುವ ಆಟಗಾರ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು 2018ರ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಕಂಡಿರುವುದಕ್ಕೆ ಮಾತನಾಡಿರುವ ಅವರು, ಕಳೆದ ಸೆಮಿಫೈನಲ್ನಲ್ಲಿ ಸೋಲು ಕಂಡ ಮೇಲೆ ನಾವು ಒಂದು ತಂಡವಾಗಿ ಕೆಲಸ ಮಾಡಬೇಕಿತ್ತು ಎಂದು ಅರಿವಾಗಿದೆ. ಪ್ರಸ್ತುತ ನಮ್ಮ ತಂಡ ಒಗ್ಗಟ್ಟಾಗಿ ಕಠಿಣ ಪರಿಶ್ರಮ ಪಟ್ಟು ಆಡುತ್ತಿದ್ದೇವೆ. ನಾವು ಯಾವುದೇ ಒಂದು ಅಥವಾ ಎರಡು ಆಟಗಾರರನ್ನು ನಂಬಿ ಆಡುತ್ತಿಲ್ಲ" ಎಂದಿರುವ ಕೌರ್ ಇಂಗ್ಲೆಂಡ್ ಎದುರಿಸುವುದಕ್ಕೆ ಸಿದ್ಧ ಎಂದು ತಿಳಿಸಿದ್ದಾರೆ.
ಹಿಂದೆ ನಡೆದಿರುವುದನ್ನು ನಾವು ಬದಲಾಯಿಸಲು ಆಗುವುದಿಲ್ಲ. ಅದರೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪ್ರಸ್ತುತ ನಡೆಯುತ್ತಿರುವುದರ ಕಡೆಗೆ ಸಕರಾತ್ಮಕವಾಗಿ ಅಲೋಚನೆ ಮಾಡಬೇಕಿದೆ. ನಾವು ಇಂಗ್ಲೆಂಡ್ ವಿರುದ್ಧ ಒಂದು ತಂಡವಾಗಿ ಆಡಿ ಗೆಲ್ಲಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.