ಕ್ರೈಸ್ಟ್‌ಚರ್ಚ್ (ನ್ಯೂಜಿಲ್ಯಾಂಡ್): ಪಾಕಿಸ್ತಾನ ಕ್ರಿಕೆಟ್ ತಂಡದ ಆರು ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾಗಿರುವ ಬೆನ್ನಲ್ಲೆ, ಇದೀಗ ಮತ್ತೊಬ್ಬ ಆಟಗಾರನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ನ್ಯೂಜಿಲ್ಯಾಂಡ್ನ ಆರೋಗ್ಯ ಸಚಿವಾಲಯ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ವಾರಂಟೈನ್ ಪ್ರೋಟೋಕಾಲ್ಗಳನ್ನು ಉಲ್ಲಂಘಿಸಿದ ನಂತರ ನ್ಯೂಜಿಲ್ಯಾಂಡ್ ಸರ್ಕಾರ ಅವರಿಗೆ "ಅಂತಿಮ ಎಚ್ಚರಿಕೆ" ನೀಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಿಇಒ ವಾಸೀಂ ಖಾನ್ ತಂಡಕ್ಕೆ ತಿಳಿಸಿದ್ದಾರೆ. ತಂಡವು ಮತ್ತೆ ನಿಯಮ ಉಲ್ಲಂಘನೆ ಮಾಡಿದ್ರೆ "ಅವರು ನಮ್ಮನ್ನು ಮನೆಗೆ ಕಳುಹಿಸುತ್ತಾರೆ" ಎಂದು ಆಟಗಾರರಿಗೆ ಎಚ್ಚರಿಕೆ ನೀಡಿದರು.
"ನಾನು ನ್ಯೂಜಿಲೆಂಡ್ ಸರ್ಕಾರದೊಂದಿಗೆ ಮಾತನಾಡಿದ್ದೇನೆ, ಮೂರು ಅಥವಾ ನಾಲ್ಕು ನಿಯಮಗಳ ಉಲ್ಲಂಘನೆ ಆಗಿದೆ ಎಂದು ಅವರು ನಮಗೆ ತಿಳಿಸಿದರು. ಅವರು ನಮಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಇದು ನಿಮಗೆ ಕಷ್ಟದ ಸಮಯ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ನೀವು ಇಂಗ್ಲೆಂಡ್‌ನಲ್ಲೂ ಇದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸಿದ್ದೀರಿ" ಎಂದು ವಾಸೀಂ ಖಾನ್ ಆಟಗಾರರಿಗೆ ವಾಟ್ಸ್ಆ್ಯಪ್ ಮೂಲಕ ಧ್ವನಿ ಸಂದೇಶ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
"ಇದು ರಾಷ್ಟ್ರದ ಗೌರವ ಮತ್ತು ವಿಶ್ವಾಸಾರ್ಹತೆಯ ವಿಷಯವಾಗಿದೆ. ಈ 14 ದಿನಗಳನ್ನು ಗಮನಿಸಿ ನಂತರ ನಿಮಗೆ ರೆಸ್ಟೋರೆಂಟ್‌ಗಳಿಗೆ ಹೋಗಲು ಮತ್ತು ಮುಕ್ತವಾಗಿ ವಿಹರಿಸಲು ಸ್ವಾತಂತ್ರ್ಯವಿದೆ. ನಾವು ಇನ್ನೊಂದು ನಿಯಮ ಉಲ್ಲಂಘಿಸಿದ್ರೆ ಅವರು ನಮ್ಮನ್ನು ತವರಿಗೆ ಕಳುಹಿಸುತ್ತಾರೆ" ಎಂದು ಹೇಳಿದ್ದಾರೆ.
ಬಾಬರ್ ಅಜಮ್ ನೇತೃತ್ವದ 53 ಸದಸ್ಯರ ಬಲಿಷ್ಠ ಪಾಕಿಸ್ತಾನ ತಂಡವು ಮಂಗಳವಾರ ನ್ಯೂಜಿಲ್ಯಾಂಡ್ಗೆ ಆಗಮಿಸಿದೆ. ಪ್ರೋಟೋಕಾಲ್ ಪ್ರಕಾರ 14 ದಿನಗಳ ಕ್ವಾರಂಟೈನ್ ಅವಧಿಯನ್ನು ಕಡ್ಡಾಯವಾಗಿ ಪೂರೈಸುತ್ತಿದೆ. ಈ ಹಿಂದೆ ಆರು ಆಟಗಾರರಿಗೆ ಸೋಂಕು ತಗುಲಿತ್ತು, ಇದೀಗ ಮತ್ತೊಬ್ಬ ಆಟಗಾರನಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.