ಮುಂಬೈ: ದೇಶವ್ಯಾಪಿ ತಾಂಡವವಾಡುತ್ತಿರುವ ಕೊರೊನಾದಿಂದ ಸಾಕಷ್ಟು ಬಡಜನರು ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಕ್ರಿಕೆಟಿಗರು, ಸಿನಿಮಾ ನಟರು ನೊಂದ ಜನರ ಪಾಲಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಹಲವಾರು ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇದೀಗ ಅವರ ಸಾಲಿಗೆ ಯುವ ಕ್ರಿಕೆಟಿಗ ಸರ್ಫರಾಜ್ ಖಾನ್ ಸೇರಿದ್ದಾರೆ.
ಮುಂಬೈ ರಣಜಿ ತಂಡದಲ್ಲಿ ಆಡುತ್ತಿರುವ ಉತ್ತರ ಪ್ರದೇಶದ ಸರ್ಫರಾಜ್ ಖಾನ್ ಅವರ ತಂದೆ ಜೊತೆಗೂಡಿ ತಮ್ಮ ತವರಾದ ಅಜಾಮ್ಗರ್ನಲ್ಲಿ ಬಡವರಿಗೆ ,ಕೂಲಿ ಕಾರ್ಮಿಕರಿಗೆ, ರಿಕ್ಷಾ,-ಟ್ರಕ್ ಡ್ರೈವರ್ಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಫರಾಜ್ ಖಾನ್ , ಈ ವರ್ಷ ನಮ್ಮ ಮನೆಯಲ್ಲಿ ಈದ್ ಆಚರಿಸುತ್ತಿಲ್ಲ. ಹಬ್ಬಕ್ಕಾಗಿ ಮೀಸಲಿಟ್ಟಿರುವ ಹಣವನ್ನು ಅಗತ್ಯವಿರುವ ಜನರಿಗಾಗಿ ವಿನಿಯೋಗಿಸುತ್ತಿದ್ದೇವೆ. ಯಾರ ಬಳಿ ಹಣವಿದೆಯೋ ಅವರು ಕೂಡ ಬಡ ಜನರಿಗೆ ಸಹಾಯ ಮಾಡಲು ಧಾವಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಊರಿಗೆ ವಾಪಸ್ ಆಗುತ್ತಿರುವ ಜನರಿಗೆ ನಾವು ಊಟದ ಪಾಕೆಟ್ ಮತ್ತು ವಾಟರ್ ಬಾಟಲ್ಗಳನ್ನು ನೀಡುತ್ತಿದ್ದೇವೆ. ಅವರು ತಮ್ಮ ಊರಿಗೆ ಹೋಗುವ ಸಲುವಾಗಿ ಹಲವು ದಿನಗಳಿಂದ ಪ್ರಯಾಣ ಬೆಳೆಸಿದ್ದಾರೆ. ಕೆಲವರು ಬಾಯಾರಿಕೆ ಹಾಗೂ ಹಸಿವಿನಿಂದ ದಣಿದಿರುತ್ತಾರೆ. ನಾವು ಕೂಡ ರಂಜಾನ್ನಲ್ಲಿ ಉಪವಾಸ ಮಾಡುತ್ತೇವೆ. ನಮಗೆ ಆಹಾರ ಮತ್ತು ನೀರಿನ ಮಹತ್ವ ತಿಳಿದಿದೆ ಎಂದಿದ್ದಾರೆ.