ಚೆನ್ನೈ: ಅದ್ಭುತ ಫಾರ್ಮ್ನಲ್ಲಿರುವ ಜೋ ರೂಟ್ ಭಾರತದ ಫಿಚ್ಗಳಲ್ಲಿ ತಮ್ಮ ಅತ್ಯುತ್ತಮ ಆಟವನ್ನು ಮುಂದುವರಿಸಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ 258 ರನ್ ಸಿಡಿಸಿರುವುದೇ ಇದಕ್ಕೆ ಸಾಕ್ಷಿ.
ಇಂಗ್ಲೆಂಡ್ ತಂಡದ ನಾಯಕನಾಗಿರುವ ರೂಟ್ ಕಳೆದ 3 ಪಂದ್ಯಗಳಲ್ಲಿ ಏಷ್ಯಾದ ಪಿಚ್ಗಳಲ್ಲಿ ಸತತ ಶತಕ ಸಾಧನೆ ಮಾಡಿದ್ದಾರೆ. ಭಾರತದ ವಿರುದ್ಧ 17 ಪಂದ್ಯಗಳನ್ನಾಡಿದ್ದು, 1679ರನ್ ಗಳಿಸಿದ್ದಾರೆ. ಭಾರತದ ನೆಲದಲ್ಲಿ 2012ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅವರು ಆಡಿರುವ 7 ಪಂದ್ಯಗಳಲ್ಲಿ 842 ರನ್ಗಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರನ್ಗಳ ಶಿಖರವನ್ನೇ ಕಟ್ಟಿದ್ದ ರೂಟ್ 2 ಪಂದ್ಯಗಳಿಂದ 426 ರನ್ ಸಿಡಿಸಿದ್ದರು. ಅದೇ ಪ್ರದರ್ಶನವನ್ನು ಭಾರತದಲ್ಲೂ ಮುಂದುವರಿಸಿದ ಇಂಗ್ಲೆಂಡ್ ಕ್ಯಾಪ್ಟನ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 5ನೇ ದ್ವಿಶತಕ ದಾಖಲಿಸಿದರು. ಎರಡನೇ ಇನ್ನಿಂಗ್ಸ್ನಲ್ಲೂ ತ್ವರಿತ 40 ರನ್ಗಳಿಸಿ ತಂಡ 227ರನ್ಗಳ ಬೃಹತ್ ಜಯ ಸಾಧಿಸುವಂತೆ ನೆರವಾದರು.
ಏಷ್ಯಾದ ನೆಲದಲ್ಲಿ ರೂಟ್ ಕಳೆದ 6 ಇನ್ನಿಂಗ್ಸ್ಗಳಿಂದ 2 ದ್ವಿಶತಕ ಮತ್ತು ಒಂದು ಶತಕದ ನೆರವಿನಿಂದ 684 ರನ್ ಸಿಡಿಸಿದ್ದಾರೆ. ರೂಟ್ ಬ್ಯಾಟಿಂಗ್ ಅಂಕಿ - ಅಂಶಗಳನ್ನು ನೋಡಿದರೆ ಅವರಿಗೆ ಭಾರತವೇ ನೆಚ್ಚಿನ ಎದುರಾಳಿ ಎಂದು ತೋರಿಸುತ್ತಿದೆ. ಅವರು ಭಾರತದ ವಿರುದ್ಧ 62.19ರ ಸರಾಸರಿಯಲ್ಲಿ 1679 ರನ್ಗಳಿಸಿದ್ದಾರೆ. ಭಾರತದಲ್ಲಿ 64.77ರ ಸರಾಸರಿಯಲ್ಲಿ 2 ಶತಕ ಮತ್ತು 5 ಅರ್ಧಶತಕ ಸಹಿತ 842 ರನ್ಗಳಿಸಿದ್ದಾರೆ.
ಅಲ್ಲದೇ ಇಂಗ್ಲೆಂಡ್ ತಂಡ ಕಳೆದ ಪ್ರವಾಸದಲ್ಲಿ 4-0ಯಲ್ಲಿ ಸರಣಿ ಕಳೆದುಕೊಂಡರೂ ರೂಟ್ ಮಾತ್ರ ವಿಶಾಖಪಟ್ಟಣದಲ್ಲಿ 78, ಮೊಹಾಲಿಯಲ್ಲಿ 93, ರಾಜ್ಕೋಟ್ನಲ್ಲಿ 128, ನಾಗ್ಪುರ್ನಲ್ಲಿ 93 ಹಾಗೂ ಮುಂಬೈನಲ್ಲಿ 98ರನ್ಗಳಿಸಿ ಭಾರತದ ಬೌಲರ್ಗಳ ವಿರುದ್ಧ ಯಶಸ್ಸು ಸಾಧಿಸಿದ್ದರು.
ರೂಟ್ ಭಾರತದ ವಿರುದ್ಧ ಮಾತ್ರವಲ್ಲದೇ ಏಷ್ಯಾ ದೇಶಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧವೂ ಅದ್ಭುತ ಪ್ರದರ್ಶನ ತೋರಿದ್ದಾರೆ. ಶ್ರೀಲಂಕಾ ವಿರುದ್ಧ 5 ಪಂದ್ಯಗಳಲ್ಲಿ 65.50 ಸರಾಸರಿಯಲ್ಲಿ 655 ರನ್, ಬಾಂಗ್ಲಾದೇಶದಲ್ಲಿ 2 ಪಂದ್ಯಗಳಲ್ಲಿ 98ರನ್ಗಳಿಸಿದ್ದಾರೆ. ಪಾಕಿಸ್ತಾನದಲ್ಲಿ ಆಡದಿದ್ದರೂ, ಅವರು ವಿರುದ್ಧ ಯುಎಇನಲ್ಲಿ ನಡೆದಿದ್ದ 3 ಟೆಸ್ಟ್ ಪಂದ್ಯಗಳಲ್ಲಿ 57.40 ಸರಾಸರಿಯಲ್ಲಿ 287ರನ್ಗಳಿಸಿದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ನ ಪಕ್ಕ ಬ್ಯಾಟ್ಸ್ಮನ್ ಆಗಿರುವ ರೂಟ್ 100 ಟೆಸ್ಟ್ ಪಂದ್ಯಗಳಿಂದ 20 ಶತಕ, 49 ಅರ್ಧಶತಕ ಸಹಿತ 8507ರನ್ಗಳಿಸಿ ಪ್ರಸ್ತುತ ಸಕ್ರಿಯರಾಗಿರುವ ಬ್ಯಾಟ್ಸ್ಮನ್ಗಳ ಪೈಕಿ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ.
ಕಳೆದ 6 ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 40, 218, 11,186,1 ಮತ್ತು 218 ರನ್ಗಳಿಸಿರುವ ರೂಟ್ರನ್ನು ಭಾರತ ತಂಡ ಮುಂದಿನ 3 ಪಂದ್ಯಗಳಲ್ಲಿ ತೀವ್ರವಾಗಿ ನಿಯಂತ್ರಿಸಲು ಬಯಸುತ್ತಿದೆ. ಅದು ಅನಿವಾರ್ಯ ಕೂಡ ಆಗಿದೆ.
ಇದನ್ನು ಓದಿ:ಇಂಗ್ಲೆಂಡ್ ತಂಡ ನಮಗಿಂತ ಹೆಚ್ಚು ಸ್ಥಿರತೆ, ವೃತ್ತಿಪರ ಪ್ರದರ್ಶನ ತೋರಿದೆ: ವಿರಾಟ್ ಕೊಹ್ಲಿ