ಮುಂಬೈ: ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಸೋತು ಟೀಂ ಇಂಡಿಯಾ ಮಹಾಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ, ಟಿ20 ಹಾಗೂ ಟೆಸ್ಟ್ ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾಗೆ ತಂಡ ಮುನ್ನಡೆಸಲಿದ್ದಾರೆ.
ಕಳೆದೆರಡು ವರ್ಷಗಳಿಂದ ಕೊಹ್ಲಿ ನಿರಂತರವಾಗಿ ಕ್ರಿಕೆಟ್ ಆಡುತ್ತಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಮುಂದಾಗಿದ್ದು, ಇದರ ಜತೆಗೆ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯಗೂ ಆಯ್ಕೆ ಸಮಿತಿ ವಿಶ್ರಾಂತಿ ನೀಡಲು ಮುಂದಾಗಿದೆ ಎನ್ನಲಾಗಿದೆ.
ಟೀಂ ಇಂಡಿಯಾ ಜೊತೆಗೆ ಭಾನುವಾರ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಲಂಡನ್ನಿಂದ ವಾಪಸ್ ಆಗುತ್ತಿದ್ದು, ವೆಸ್ಟ್ ಇಂಡೀಸ್ ಸರಣಿಗಾಗಿ ಕೆಲವೊಂದು ಅಚ್ಚರಿಯ ಬದಲಾವಣೆ ಆಗುವುದು ಕನ್ಫರ್ಮ್ ಆಗಿದೆ. ಬರುವ ಜುಲೈ 17 ಹಾಗೂ 18ರಂದು ಆಯ್ಕೆ ಸಮಿತಿ ಸಭೆ ಸೇರಲಿದ್ದು, ಅಲ್ಲಿ ಮಹತ್ವದ ನಿರ್ಧಾರ ಹೊರಬೀಳಲಿದೆ.
ಆಗಸ್ಟ್ 3ರಿಂದ ಟಿ20 ಸರಣಿ ಆರಂಭಗೊಳ್ಳಲಿದ್ದು, ತದನಂತರ ಏಕದಿನ ಸರಣಿ ಹಾಗೂ ಆಗಸ್ಟ್ 22ರಿಂದ ಟೆಸ್ಟ್ ಸರಣಿ ನಡೆಯಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಮೂರು ಟಿ20, ಮೂರು ಏಕದಿನ ಸರಣಿ ಹಾಗೂ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಈ ಟೂರ್ನಿಯಲ್ಲಿ ಧೋನಿಗೆ ಅವಕಾಶ ನೀಡುತ್ತಾರಾ, ಇಲ್ಲವೋ ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ. ಉಳಿದಂತೆ ಟೆಸ್ಟ್ ಸರಣಿಯಿಂದಲೂ ಕೊಹ್ಲಿ ದೂರ ಉಳಿದರೆ ರಹಾನೆ ಟೆಸ್ಟ್ ತಂಡವನ್ನ ಮುನ್ನಡೆಸುವ ಸಾಧ್ಯತೆ ಇದೆ.