ರಾಜ್ಕೋಟ್(ಗುಜರಾತ್): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡಿರುವ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮೂರನೇ ಏಕದಿನ ಪಂದ್ಯವನ್ನ ಆಡಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 36 ರನ್ಗಳ ಜಯ ದಾಖಲಿಸಿದೆ. ಪಂದ್ಯದ ವೇಳೆ 43ನೇ ಓವರ್ನಲ್ಲಿ ಬೌಂಡರಿ ಗೆರೆ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ರೋಹಿತ್, ಚೆಂಡು ಹಿಡಿಯುವ ವೇಳೆ ಎಡ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು.
ಪಂದ್ಯದ ನಂತರ ರೋಹಿತ್ ಶರ್ಮಾ ಜೊತೆ ಮಾತನಾಡಿದ್ದೇನೆ. ಎಡ ಭುಜಕ್ಕೆ ಪೆಟ್ಟಾಗಿದ್ದು, ಅಷ್ಟೊಂದು ಗಂಭೀರ ಗಾಯವೇನು ಆಗಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕೆ ರೋಹಿತ್ ಲಭ್ಯವಾಗಲಿದ್ದಾರೆ ಎಂದು ವಿರಾಟ್ ಹೇಳಿದ್ದಾರೆ. ಏರಡನೇ ಏಕದಿನ ಪಂದ್ಯದಲ್ಲಿ 42 ರನ್ ಸಿಡಿಸಿದ್ದ ರೋಹಿತ್ ಶರ್ಮಾ, ಆ್ಯಡಂ ಜಂಪಾ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದಿದ್ದರು.