ಅಬುಧಾಬಿ: ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆಯುವ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಎರಡು ಬಲಿಷ್ಠ ತಂಡಗಳು ಇಂದು ಮುಖಾಮುಖಿಯಾಗಲಿದ್ದು, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 5000 ರನ್ಗಳಿಸುವ ಅವಕಾಶವಿದ್ದು, ಇಂದಿನ ಪಂದ್ಯದಲ್ಲಿ 90 ರನ್ಗಳಿಸಿದರೆ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಈಗಾಗಲೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ(5426) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ(5368) ಐಪಿಎಲ್ನಲ್ಲಿ 5000 ರನ್ ಪೂರೈಸಿರುವ ಬ್ಯಾಟ್ಸ್ಮನ್ ಆಗಿದ್ದಾರೆ. ಕೊಹ್ಲಿ 178 ಪಂದ್ಯಗಳನ್ನಾಡಿದ್ದರೆ, ರೈನಾ 193 ಪಂದ್ಯಗಳನ್ನಾಡಿದ್ದಾರೆ.
ರೋಹಿತ್ ಶರ್ಮಾ 189 ಪಂದ್ಯಗಳನ್ನಾಡಿದ್ದು, 4,910 ರನ್ಗಳಿಸಿದ್ದಾರೆ. ಇನ್ನು ಇದೇ ಪಂದ್ಯದಲ್ಲಿ 194 ಸಿಕ್ಸರ್ ಸಿಡಿಸಿರುವ ರೋಹಿತ್ ಇನ್ನು 6 ಸಿಕ್ಸರ್ ಸಿಡಿಸಿದರೆ ಐಪಿಎಲ್ನಲ್ಲಿ 200 ಸಿಕ್ಸರ್ ಸಿಡಿಸಿದ 4ನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಈಗಾಗಲೆ ಕ್ರಿಸ್ ಗೇಲ್(326), ಎಬಿ ಡಿ ವಿಲಿಯರ್ಸ್ (214), ಎಂಎಸ್ ಧೋನಿ(212) ಸಿಕ್ಸರ್ ಸಿಡಿಸಿದ್ದಾರೆ.
ಇನ್ನು ಕೆಕೆಆರ್ ವಿರುದ್ಧ ಒಂದು ಕ್ಯಾಚ್ ಪಡೆದರೆ ಆರ್ಸಿಬಿಯ ಎಬಿ ಡಿ ವಿಲಿಯರ್ಸ್ ಅವರನ್ನು ಹಿಂದಿಕ್ಕಿ ಐಪಿಎಲ್ನಲ್ಲಿ ಹೆಚ್ಚು ಕ್ಯಾಚ್ ಪಡೆದ 2ನೇ ಫೀಲ್ಡರ್ ಎನಿಸಿಕೊಳ್ಳಲಿದ್ದಾರೆ. ಸಿಎಸ್ಕೆ ತಂಡದ ರೈನಾ 102 ಕ್ಯಾಚ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.