ದುಬೈ : ಐಪಿಎಲ್ನ 13ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ಮುಖಾಮುಖಿಯಾಗುತ್ತಿವೆ. ಮೊದಲ ಪಂದ್ಯ ಸೋತು ಎರಡನೇ ಪಂದ್ಯ ಗೆದ್ದಿರುವ ಮುಂಬೈ ಹಾಗೂ ಮೊದಲ ಪಂದ್ಯ ಗೆದ್ದು 2ನೇ ಪಂದ್ಯ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಎರಡನೇ ಗೆಲುವಿಗಾಗಿ ಎದುರು ನೋಡುತ್ತಿವೆ.
ಕಳೆದ ಎರಡು ಪಂದ್ಯಗಳಲ್ಲೂ ರನ್ಗಳಿಸುವಲ್ಲಿ ವಿಫಲರಾಗಿರುವ ಕೊಹ್ಲಿ ಇಂದಿನ ಪಂದ್ಯದಲ್ಲಾದರೂ ಫಾರ್ಮ್ ಕಂಡುಕೊಳ್ಳಲಿದ್ದಾರಾ ಎಂದು ಕೋಟ್ಯಂತರ ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ. ಐಪಿಎಲ್ನಲ್ಲಿ ಗರಿಷ್ಠ ರನ್ ಸರದಾರನಾಗಿರುವ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ 85 ರನ್ ಸಿಡಿಸಿದ್ರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ 9 ಸಾವಿರ ಪೂರ್ಣಗೊಳಿಸಲಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, ಇಂದಿನ ಪಂದ್ಯದಲ್ಲಾದ್ರೂ ತನ್ನ ಖದರ್ ತೋರಿಸಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಕಿಂಗ್ ಕೊಹ್ಲಿ ಇನ್ನು 85 ರನ್ ಗಳಿಸಿದ್ರೆ ಸಾಕು ಹೊಸ ದಾಖಲೆ ಬರೆಯಲಿದ್ದಾರೆ. ಪ್ರಸ್ತುತ ಕೊಹ್ಲಿ 283 ಪಂದ್ಯಗಳಿಂದ 8,915 ರನ್ ಗಳಿಸಿದ್ದಾರೆ. ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ( 13,296), ಕೈರನ್ ಪೊಲಾರ್ಡ್ ( 10,238), ಬ್ರೆಂಡನ್ ಮೆಕಲಮ್ (9922), ಶೋಯೆಬ್ ಮಲಿಕ್ (9906), ಡೇವಿಡ್ ವಾರ್ನರ್ (9318) ಹಾಗೂ ಆರೋನ್ ಫಿಂಚ್ (9008) 9 ಸಾವಿರ ರನ್ ಗಡಿ ದಾಟಿದ್ದಾರೆ.
ರೋಹಿತ್ 5000 ರನ್ : ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಇಂದಿನ ಪಂದ್ಯದಲ್ಲಿ ಕೇವಲ 10 ರನ್ಗಳಿಸಿದ್ರೆ, ಐಪಿಎಲ್ನಲ್ಲಿ 5000 ರನ್ ಪೂರೈಸಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮಾ ಪ್ರಸ್ತುತ 190 ಪಂದ್ಯಗಳಿಂದ 4990 ರನ್ಗಳಿಸಿದ್ದಾರೆ. ಈಗಾಗಲೇ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ 178 ಪಂದ್ಯಗಳಿಂದ 5426 ರನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ193 ಪಂದ್ಯಗಳಿಂದ 5368 ರನ್ಗಳಿಸುವ ಮೂಲಕ ಐಪಿಎಲ್ನಲ್ಲಿ 5000 ರನ್ ಪೂರೈಸಿರುವ ಬ್ಯಾಟ್ಸ್ಮನ್ ಆಗಿದ್ದಾರೆ.