ನವದೆಹಲಿ: ಮಾಜಿ ನಾಯಕ ಎಂ ಎಸ್ ಧೋನಿ ಅವರ ನಾಯಕತ್ವದ ಗುಣ ಹಾಗೂ ಡ್ರೆಸ್ಸಿಂಗ್ ರೂಂನ ಮೇಲೆ ಅವರು ಬೀರಿದ ಪರಿಣಾಮದಿಂದಾಗಿ, ರೋಹಿತ್ ಶರ್ಮಾ ಕೂಡಾ ಧೋನಿಯನ್ನು ಫಾಲೋ ಮಾಡುವಂತೆ ಭಾರತ ತಂಡದ ಆಲ್‌ರೌಂಡರ್ ಸುರೇಶ್ ರೈನಾ ಹೇಳಿದ್ದಾರೆ.
ಸದ್ಯ ಸೀಮಿತ ಓವರ್ಗಳ ಕ್ರಿಕೆಟ್ ತಂಡದ ಉಪನಾಯಕನಾಗಿರುವ ರೋಹಿತ್ ಶರ್ಮಾ, ನಾಯಕನಾಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಅವರು ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಮೂಲಕ ನಾಲ್ಕು ಬಾರಿ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿ ಹಂತಕ್ಕೆ ಕರೆದೊಯ್ದಿದ್ದಾರೆ. ಐಪಿಎಲ್ನಲ್ಲಿ ಮುಂಬೈ ತಂಡವನ್ನು ಅತ್ಯಂತ ಯಶಸ್ವಿ ತಂಡವನ್ನಾಗಿ ಮಾಡಿದ್ದಾರೆ. ರೋಹಿತ್ಗೆ 2018 ರ ಏಷ್ಯಾಕಪ್ ಗೆದ್ದ ಭಾರತ ತಂಡದ ನಾಯಕತ್ವ ವಹಿಸಿದ್ದ ಅನುಭವವೂ ಇದೆ ಎಂದು ರೈನಾ ಕೊಂಡಾಡಿದ್ದಾರೆ.
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜೆ.ಪಿ. ಡ್ಯುಮಿನಿ ಆಯೋಜಿಸಿದ್ದ ಪೋಡ್ಕಾಸ್ಟ್ನಲ್ಲಿ ಮಾತನಾಡಿರುವ ರೈನಾ, ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ತಂಡದ ಮುಂದಿನ ಎಂ.ಎಸ್. ಧೋನಿ ಎಂದು ನಾನು ಹೇಳುತ್ತೇನೆ ಎಂದು ಹೇಳಿದ್ದಾರೆ.
ನಾನು ರೋಹಿತ್ ಶರ್ಮಾರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರದ್ದು ತುಂಬಾ ಶಾಂತ ಸ್ವಭಾವ. ಪ್ರತಿಯೊಬ್ಬರ ಮಾತನ್ನೂ ಅವರು ಕೇಳಲು ಇಷ್ಟಪಡುತ್ತಾರೆ. ಪ್ರತಿಯೊಬ್ಬ ಆಟಗಾರರಿಗೆ ಆತ್ಮವಿಶ್ವಾಸವನ್ನು ತುಂಬಲು ಇಷ್ಟಪಡುತ್ತಾರೆ. ಮುಖ್ಯವಾಗಿ ತಂಡವನ್ನು ಮುಂದೆ ನಿಂತು ಮುನ್ನಡೆಸಲು ಇಷ್ಟಪಡುತ್ತಾರೆ. ಒಬ್ಬ ನಾಯಕ ತಂಡವನ್ನು ಮುಂದೆ ನಿಂತು ಮುನ್ನಡೆಸುವ ಜೊತೆಗೆ, ಡ್ರೆಸ್ಸಿಂಗ್ ಕೋಣೆಯ ವಾತಾವರಣಕ್ಕೆ ಗೌರವ ಕೊಡಬೇಕು. ರೋಹಿತ್ ಈ ಎಲ್ಲ ಗುಣವನ್ನು ಹೊಂದಿದ್ದಾರೆ ಎಂದು ಎಂದು ರೈನಾ ಹೇಳಿದ್ದಾರೆ.