ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನಾಡಲು ಭಾರತ ತಂಡ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
2018-19ರಲ್ಲಿ ಭಾರತ ತಂದ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ವಿರಾಟ್ ಕೊಹ್ಲಿ ತಾವೂ ಮುಂದಿನ ಆಸೀಸ್ ಪ್ರವಾಸದಲ್ಲಿ ಪಿಂಕ್ಬಾಲ್ ಟೆಸ್ಟ್ ಆಡಲು ಸಿದ್ಧರಿದ್ದೇವೆ ಎಂದು ಖಚಿತಪಡಿಸಿದ್ದಾರೆ.
ನಾವು ಇಲ್ಲಿ ಡೇ ಅಂಡ್ ನೈಟ್ ಟೆಸ್ಟ್ ಆಡಿದ್ದೇವೆ. ಆದ್ದರಿಂದ ಅದನ್ನು ಮುಂದುವರಿಸಲು ಸಂತೋಷವಿದೆ. ಅಲ್ಲದೆ ಇದು ಭವಿಷ್ಯದಲ್ಲಿ ಯಾವುದೇ ಟೆಸ್ಟ್ ಸರಣಿಯಲ್ಲಾದರೂ ವಿಶೇಷ ಭಾಗವಾಗಿರುತ್ತದೆ. ನಾವು ಡೇ ಅಂಡ್ ಟೆಸ್ಟ್ ಆಡಲು ಸಂಪೂರ್ಣ ಸಿದ್ಧರಿದ್ದೇವೆ ಎಂದು ಆಸೀಸ್ ವಿರುದ್ಧದ ಏಕದಿನ ಸರಣಿಯ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾವು ಸವಾಲನ್ನು ಸ್ವೀಕರಿಸಲು ಸಿದ್ದರಿದ್ದೇವೆ, ಅದು ಗಬ್ಬ ಅಥವಾ ಪರ್ತ್ ಯಾವುದೇ ಕ್ರೀಡಾಂಗಣವಾದರು ನಮಗೆ ಸಮಸ್ಯೆಯಿಲ್ಲ. ನಾವು ಉತ್ತಮ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದು, ವಿಶ್ವದ ಯಾವುದೇ ತಂಡದ ವಿರುದ್ಧವಾದರೂ, ಯಾವುದೇ ಫಾರ್ಮೇಟ್ನಲ್ಲಾದರೂ ಯಾವುದೇ ರೀತಿಯ ಸ್ಪರ್ಧೆಗಾದರೂ ಸಂಪೂರ್ಣ ಸಿದ್ಧರಿದ್ದೇವೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಕಳೆದಬಾರಿ ಆಸೀಸ್ ಪ್ರವಾಸ ಕೈಗೊಂಡಿದ್ದಾಗ ಏಕದಿನ ಸರಣಿಯನ್ನು 2-1ರಲ್ಲಿ, ಟೆಸ್ಟ್ ಸರಣಿಯನ್ನು 2-1ರಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಆ ಸಂದರ್ಭದಲ್ಲಿದ್ದ ತಂಡಕ್ಕಿಂತ ಪ್ರಸ್ತುತ ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ. ಸ್ಮಿತ್, ವಾರ್ನರ್ ತಂಡಕ್ಕೆ ಮರಳಿದ್ದಾರೆ. ಲಾಬುಶೇನ್ ಅಂದು ಕೇವಲ ಒಂದು ಪಂದ್ಯವನ್ನಾಡಿದ್ದರು. ಆದರೆ ಅವರು ಅದ್ಭುತ ಫಾರ್ಮ್ನಲ್ಲಿದ್ದಾರೆ ಹಾಗಾಗಿ ಮುಂದಿನ ಆಸ್ಟ್ರೇಲಿಯಾ ತಂಡವನ್ನು ಮಣಿಸುವುದು ಸುಲಭದ ಮಾತಲ್ಲ. ನಾವಿಬ್ಬರು ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲೆರಡು ಸ್ಥಾನದಲ್ಲಿದ್ದೇವೆ. ಇಬ್ಬರ ನಡುವಿನ ಸರಣಿ ನೋಡಲು ಅದ್ಭುತವಾಗಿರುತ್ತದೆ. ಅಲ್ಲದೆ ಈ ಬಾರಿಯ ಸರಣಿ ಕಳೆದ 5-6 ವರ್ಷಗಳ ಹಿಂದಿನ ಸರಣಿಗಿಂದ ಸಂಪೂರ್ಣ ವಿಭಿನ್ನವಾಗಿರಲಿದೆ ಎಂದು ತಿಳಿಸಿದ್ದಾರೆ.