ಬೆಂಗಳೂರು : ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ನಡೆಯುವ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಆ್ಯಡಂ ಜಂಪಾ ಆಡುವುದಿಲ್ಲ ಎಂದು ಆರ್‌ಸಿಬಿ ಡೈರೆಕ್ಟರ್ ಆಫ್ ಕ್ರಿಕೆಟ್ ಮೈಕ್ ಹೆಸನ್ ಖಚಿತಪಡಿಸಿದ್ದಾರೆ.
ಬೆಂಗಳೂರು ಫ್ರಾಂಚೈಸಿ ಏಪ್ರಿಲ್ 9ರಂದು ಚೆನ್ನೈನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಕಳೆದ ಆವೃತ್ತಿಯಲ್ಲಿ ಕೇವಲ 3 ಪಂದ್ಯಗಳನ್ನಷ್ಟೇ ಆಡಿರುವ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಮೊದಲ ಪಂದ್ಯದ ಆಯ್ಕೆಗೆ ಲಭ್ಯರಾಗುತ್ತಿಲ್ಲ. ಕಾರಣ ಲೆಗ್ ಸ್ಪಿನ್ನರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಆರ್‌ಸಿಬಿ ಬಿಡುಗಡೆ ಮಾಡಿರುವ ಬೋಲ್ಡ್ ಡೈರೀಸ್ ವಿಡಿಯೋದಲ್ಲಿ ಹೆಸನ್ ತಿಳಿಸಿದ್ದಾರೆ.
"ಮೊದಲ ಪಂದ್ಯದಕ್ಕೆ ನಮ್ಮ ಸಂಪೂರ್ಣ ವಿದೇಶಿ ಆಟಗಾರರು ಲಭ್ಯವಿರುವುದಿಲ್ಲ. ಆ್ಯಡಂ ಜಂಪಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದು ಅವರಿಗೆ ಮಹತ್ವದ ಸಮಯ ಎಂದು ಫ್ರಾಂಚೈಸಿಯಾಗಿ ನಮಗೆ ತಿಳಿದಿದೆ. ಮತ್ತು ನಾವು ಅದನ್ನು ಗೌರವಿಸುತ್ತೇವೆ. ಅವರು ಹೊಸತನದೊಂದಿಗೆ ತಂಡ ಸೇರಿದ ನಂತರ, ಟೂರ್ನಿಯಲ್ಲಿ ತಂಡದ ಯಶಸ್ಸಿಗೆ ಬಹುದೊಡ್ಡ ಕೊಡುಗೆ ನೀಡಲಿದ್ದಾರೆ ಎಂಬ ಭರವಸೆಯಿದೆ" ಎಂದು ಅವರು ತಿಳಿಸಿದ್ದಾರೆ.
ನಮಗೆ 8 ಉತ್ತಮ ವಿದೇಶಿ ಆಟಗಾರರ ಆಯ್ಕೆಯಿದೆ. ನಾವು ಆಟಗಾರರನ್ನು ಮೊದಲ ಪಂದ್ಯದಲ್ಲಿ ಮಾತ್ರವಲ್ಲ, ಇಡೀ ಟೂರ್ನಮೆಂಟ್ನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಹುರಿದುಂಬಿಸಲಿದ್ದೇವೆ ಎಂದು ಹೆಸನ್ ತಿಳಿಸಿದ್ದಾರೆ.
ಮಾರ್ಚ್ 29ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತರಬೇತಿ ಆರಂಭಿಸಲಿದೆ. ಜೋಸ್ ಫಿಲಿಪ್ಪೆ ಬದಲಿಗೆ ತಂಡ ಸೇರಿರುವ ಫಿನ್ ಅಲೆನ್ ಏಪ್ರಿಲ್ 1 ನ್ಯೂಜಿಲ್ಯಾಂಡ್ ಪರ ಟಿ20 ಆಡಲಿದ್ದು, ಮಾರನೆಯ ದಿನ ಫ್ಲೈಟ್ ಏರಲಿದ್ದಾರೆ. ಎಬಿಡಿ ವಿಲಿಯರ್ಸ್ ಏಪ್ರಿಲ್ 28ರಂದು ಆಗಮಿಸಲಿದ್ದಾರೆ ಎಂದು ಹೆಸನ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಐಪಿಎಲ್ 2021: ಜೋಶ್ ಅಲಭ್ಯ ಹಿನ್ನೆಲೆ ಫಿನ್ಗೆ ಅವಕಾಶ ನೀಡಿದ ಆರ್‌ಸಿಬಿ