ಆಕ್ಲೆಂಡ್: ನ್ಯೂಜಿಲ್ಯಾಂಡ್ ವಿರುದ್ಧ 2ನೇ ಏಕದಿನ ಪಂದ್ಯದ ಸೋಲಿನ ನಡುವೆಯೂ ಮಿಂಚಿದ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಮಾಜಿ ನಾಯಕರಾದ ಕಪಿಲ್ ದೇವ್, ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಗಳನ್ನು ಮುರಿದಿದ್ದಾರೆ.
ಆಕ್ಲೆಂಡ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಆಲ್ರೌಂಡರ್ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ಹತ್ತಿರ ತಂದಿದ್ದರು. ಆದರೆ ಇತರೆ ಬ್ಯಾಟ್ಸ್ಮನ್ಗಳ ಬೆಂಬಲ ಸಿಗದೆ ಒತ್ತಡಕ್ಕೊಳಗಾಗಿ ವಿಕೆಟ್ ಒಪ್ಪಿಸಿದರು.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಜಡೇಜಾ 77 ಎಸೆತಗಳಲ್ಲಿ 55 ರನ್ ಸಿಡಿಸಿ ತಮ್ಮ 12ನೇ ಅರ್ಧಶತಕ ಪೂರೈಸಿದ್ದರು. ಅಲ್ಲದೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ 7ನೇ ಶತಕ ದಾಖಲಿಸುವ ಮೂಲಕ ಭಾರತದ ಪರ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆಗೆ ಪಾತ್ರರಾದರು. ಈ ಮೂಲಕ ಮಾಜಿ ನಾಯಕರಾದ ಧೋನಿ ಹಾಗೂ ಕಪಿಲ್ದೇವ್ ಅವರನ್ನು ಹಿಂದಿಕ್ಕಿ ದಾಖಲೆ ಮುರಿದರು. ಇವರಿಬ್ಬರೂ 7ನೇ ಕ್ರಮಾಂಕದಲ್ಲಿ ತಲಾ 6 ಅರ್ಧಶತಕ ಸಿಡಿಸಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್ 273 ರನ್ ಗಳಿಸಿದರೆ, ಭಾರತ ತಂಡ 251 ರನ್ಗಳಿಗೆ ಆಲೌಟ್ ಆಗುವ ಮೂಲಕ 22 ರನ್ಗಳ ಸೋಲು ಕಂಡಿತು.