ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಟೀಮ್ ಇಂಡಿಯಾದ ಪ್ರಸ್ತುತ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಕ್ರಿಕೆಟ್ ಜೀವನದಲ್ಲಿನ ಅವಿಸ್ಮರಣೀಯ ಕ್ಷಣಗಳು ಹಾಗೂ ಎಂದಿಗೂ ಬಿಟ್ಟುಕೊಡದ ಕೆಲವು ಆಸಕ್ತಿಕರ ಘಟನೆಗಳನ್ನು ಪುಸ್ತಕದ ರೂಪದಲ್ಲಿ ಹೊರತರಲು ಸಜ್ಜಾಗುತ್ತಿದ್ದಾರೆ.
ಈ ಪುಸ್ತಕದಲ್ಲಿ ಕ್ರೀಡಾ ಪತ್ರಕರ್ತ ಅಯಾಜ್ ಮೆಮನ್ ಮತ್ತು ಶಿವ ರಾವ್ ಎಂಬುವವರು ವಿಶೇಷವಾದ ವಿವರಣೆ ನೀಡಲಿದ್ದಾರೆ ಎಂದು ಭಾನುವಾರ ಹಾರ್ಪರ್‌ಕಾಲಿನ್ಸ್ ಇಂಡಿಯಾ (ಪಬ್ಲೀಷರ್) ಭಾನುವಾರ ತಿಳಿಸಿದೆ.
ಬಾಂಬೆ(ಇಂದಿನ ಮುಂಬೈ) ತಂಡದ ಪರ ಆಡುತ್ತಿದ್ದ ರವಿಶಾಸ್ತ್ರಿ ಇಂದಿಗೆ 36 ವರ್ಷಗಳ ಹಿಂದೆ ಬರೋಡಾದ ಬೌಲರ್ ತಿಲಕ್ ರಾಜ್ ಬೌಲಿಂಗ್ನಲ್ಲಿ 6 ಎಸೆತಗಳಿಗೆ 6 ಸಿಕ್ಸರ್ ಸಿಡಿಸಿದ್ದರು. ಹಾಗಾಗಿ ಈ ದಿನವೇ ಪುಸ್ತಕದ ಬಗ್ಗೆ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮಾಹಿತಿ ನೀಡಿದೆ.
ಈ ಪುಸ್ತಕದಲ್ಲಿ ಶಾಸ್ತ್ರಿ ಅವರು ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ಎದುರಿಸಿದ ಅಸಾಧಾರಣ ಪ್ರತಿಭೆಗಳು ಮತ್ತು ಹಿಂದೆಂದೂ ಬಹಿರಂಗಪಡಿಸದ ಕೆಲವು ಕ್ರಿಕೆಟ್ ಸಂಬಂಧಿತ ವಿಚಾರಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
"ಮೈದಾನದಲ್ಲಿ ಕೆಲವು ಶ್ರೇಷ್ಠ ಕ್ರಿಕೆಟಿಗರ ವಿರುದ್ಧ ಆಡಲು, ಪಂದ್ಯವನ್ನು ವೀಕ್ಷಿಸಿ ಕಾಮೆಂಟರಿ ಮಾಡಿದ್ದು ಮತ್ತು ಈಗ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ. ನನ್ನ ರೋಮಾಂಚಕಾರಿ ವೃತ್ತಿ ಜೀವನ ಕ್ರಿಕೆಟ್ನೊಂದಿಗೆ ಬೆರೆತುಕೊಂಡಿದ್ದು, ನನ್ನ ಕಥೆಯನ್ನು ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದು ಶಾಸ್ತ್ರಿ ಹೇಳಿದ್ದಾರೆ.
4 ದಶಕಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಶಾಸ್ತ್ರಿ, ಕ್ರಿಕೆಟ್ ಲೆಜೆಂಡ್ಗಳಾದ ವಿವಿಯನ್ ರಿಚರ್ಡ್ಸ್, ಇಯಾನ್ ಬಾಥಮ್, ಸುನೀಲ್ ಗವಾಸ್ಕರ್, ರಿಕಿ ಪಾಂಟಿಂಗ್, ಮುತ್ತಯ್ಯ ಮುರುಳೀಧರನ್, ಇಮ್ರಾನ್ ಖಾನ್ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಕ್ರಿಕೆಟಿಗರೊಂದಿಗೆ ಮತ್ತು ವಿರುದ್ಧವಾಗಿ ಆಡಿದ್ದಾರೆ.
ಜೊತೆಗೆ ವೀಕ್ಷಕ ವಿವರಣೆಗಾರನಾಗಿ ಮತ್ತು ಟೀಮ್ ಇಂಡಿಯಾ ಕೋಚ್ ಆಗಿ ಎಂಎಸ್ ಧೋನಿ, ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿಯಂತಹ ಪ್ರತಿಭೆಗಳನ್ನು ಕಂಡಿದ್ದಾರೆ. ಇದೆಲ್ಲದರ ಕುರಿತು ಈ ಪುಸ್ತಕದಲ್ಲಿ ಶಾಸ್ತ್ರಿ ತಮ್ಮ ಅಭಿಪ್ರಾಯ, ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ.