ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ನವಲೆಯ ಕೆಎಸ್ಸಿಎ ಮೈದಾನದಲ್ಲಿ ಇಂದಿನಿಂದ ಕರ್ನಾಟಕ ಹಾಗೂ ಮಧ್ಯ ಪ್ರದೇಶ ತಂಡಗಳ ನಡುವಿನ ರಣಜಿ ಪಂದ್ಯ ಆರಂಭವಾಗಿದೆ.
ಟಾಸ್ ಸೊತು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿದೆ. ಭರವಸೆಯ ಆಟಗಾರ ದೇವದತ್ ಪಡಿಕಲ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಅನುಭವಿಸಿದರು. ನಂತರ ಬಂದ ರೋಹನ್ ಕದಂ ಕೂಡ 9 ರನ್ ಗಳಿಸಿ ಪೆವಿಲಿಯನ್ಗೆ ಹಿಂದಿರುಗಿದರು. ಆದರೂ 15 ನೇ ಓವರ್ ಮುಕ್ತಾಯದ ವೇಳೆಗೆ ಕರ್ನಾಟಕ ತಂಡ ಎರಡು ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದೆ. ಕ್ರಿಸ್ನಲ್ಲಿ ಸಮರ್ಥ ಹಾಗೂ ನಾಯಕ ಕರುಣ್ ನಾಯರ್ ಇದ್ದಾರೆ.
ಇದಕ್ಕೂ ಮುನ್ನ ಪಂದ್ಯಕ್ಕೆ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಗಂಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಶಿವಮೊಗ್ಗ ಕ್ರಿಕೆಟ್ ವಲಯದ ಸಂಚಾಲಕ ಡಿ.ಎಸ್. ಅರುಣ್, ಅಧ್ಯಕ್ಷ ರಾಜೇಂದ್ರ ಕಾಮತ್, ಎಸ್ಪಿ ಶಾಂತರಾಜು ಸೇರಿದಂತೆ ಇತರರು ಹಾಜರಿದ್ದರು.