ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ಆಯೋಜಿಸಿರುವ ಬಿಸಿಸಿಐ , ಈ ಋತುವಿನಲ್ಲಿ 50 ಓವರ್ಗಳ ವಿಜಯ್ ಹಜಾರೆ, ಸೀನಿಯರ್ ವುಮೆನ್ಸ್ ಏಕದಿನ ಪಂದ್ಯ ಮತ್ತು ಅಂಡರ್ 19 ವಿಭಾಗಕ್ಕೆ ವೀನೂ ಮಂಕಡ್ ಟ್ರೋಫಿಯನ್ನು ಆಯೋಜನೆ ಮಾಡುಲು ಒಪ್ಪಿದೆ. ಆದರೆ, 87 ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ರದ್ದು ಮಾಡಲಾಗಿದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಲ್ಲಾ ಕ್ರಿಕೆಟ್ ಆಸೋಸಿಯೇಷನ್ಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದು, ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಫೀಡ್ಬ್ಯಾಕ್ ನೀಡಲು ಮನವಿ ಮಾಡಿದ್ದಾರೆ.
ಈ ಸಾಂಕ್ರಾಮಿಕ ಪ್ರತಿಯೊಬ್ಬರನ್ನು ಪರೀಕ್ಷಿಸಿದೆ. ಅದರಿಂದ ತೊಂದರೆಗೊಳಗಾಗದೇ ಇರುವವರು ಯಾರೂ ಇಲ್ಲ. ಇಂತಹ ಕಷ್ಟದ ಸಂದರ್ಭದಲ್ಲಿ ನಿಮ್ಮ ಸಹಕಾರದಿಂದ ಈಗಾಗಲೇ ಪುರುಷರ ದೇಶಿಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಪುನಾರಂಭಿಸಲು ನಮಗೆ ಸಾಧ್ಯವಾಗಿದೆ.
" ನಿಮಗೆ ತಿಳಿದಿರುವಂತೆ, ನಾವು ಈಗಾಗಲೆ ಸಾಕಷ್ಟು ಸಮಯ ಕಳೆದುಕೊಂಡಿದ್ದೇವೆ ಮತ್ತು ಇದರ ಪರಿಣಾಮವಾಗಿ, ಟೂರ್ನಿಗಳನ್ನು ಸುರಕ್ಷಿತವಾಗಿ ಅಗತ್ಯವಾದ ಮುನ್ನೆಚ್ಚರಿಕೆಯಿಂದ ಕ್ರಿಕೆಟ್ ಕ್ಯಾಲೆಂಡರ್ ಯೋಜಿಸುವುದು ನಮಗೆ ಕಷ್ಟಕರವಾಗಿದೆ. ಜೊತೆಗೆ ಮಹಿಳಾ ಕ್ರಿಕೆಟ್ಗೆ ಸ್ಥಳಾವಕಾಶ ಮಾಡಿಕೊಡುವ ಉದ್ದೇಶ ನಮಗಿದ್ದು, ಪುರುಷರ ವಿಜಯ್ ಹಜಾರೆ ಟೂರ್ನಿಯ ಜೊತೆಗೆ ಈ ಋತುವಿನಲ್ಲಿ ಮಹಿಳೆಯರ ಏಕದಿನ ಟೂರ್ನಿ ನಂತರ ಅಂಡರ್ 19 ವಿಭಾಗಕ್ಕೆ ವೀನೂ ಮಂಡಲ್ ಟೂರ್ನಿಯನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಹಾಗಾಗಿ ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ" ಎಂದು ಜಯ್ ಶಾ ತಿಳಿಸಿದ್ದಾರೆ.
ಇನ್ನು ಪತ್ರದಲ್ಲಿ ಇಷ್ಟು ಟೂರ್ನಿಗಳ ಬಗ್ಗೆ ಮಾಹಿತಿ ನೀಡಿರುವ ಅವರು ರಣಜಿ ಟೂರ್ನಿಯ ಬಗ್ಗೆ ಯಾವುದೆ ಮಾಹಿತಿ ನೀಡಿಲ್ಲ. ಇವು ಮುಗಿಯುತ್ತಿದ್ದಂತೆ ಐಪಿಎಲ್ ನಂತರ ಟಿ-20 ವಿಶ್ವಕಪ್ ಇರುವುದರಿಂದ ರಣಜಿ ಟೂರ್ನಿ ಆಯೋಜನೆ ಬಗ್ಗೆ ಬಿಸಿಸಿಐ ಚಿಂತಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕಳೆದ 87 ವರ್ಷಗಳಲ್ಲಿ ಪ್ರಥಮ ದರ್ಜೆ ಟೂರ್ನಿಯಾದ ರಣಜಿ ಟ್ರೋಫಿ ಮೊದಲ ಬಾರಿಗೆ ರದ್ದಾದಂತಾಗುತ್ತದೆ.