ಅಹಮದಾಬಾದ್: ಐಪಿಎಲ್ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷರಾಗಿ ನೇಮಕ ಮಾಡಿದೆ. ಅಹ್ಮದಾಬಾದ್ನಲ್ಲಿ ನಡೆದ ಬಿಸಿಸಿಐ 89ನೇ ವಾರ್ಷಿಕ ಸಭೆಯಲ್ಲಿ ಮಹಿಮ್ ವರ್ಮಾ ಅವರ ಸ್ಥಾನಕ್ಕೇ ಶುಕ್ಲಾ ಆಯ್ಕೆಗೊಂಡಿದ್ದಾರೆ.
ರಾಜೀವ್ ಶುಕ್ಲಾ 2017ರವರೆಗೂ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಕೆಲವು ವರ್ಷಗಳ ಕಾಲ ಐಪಿಎಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ರಾಜೀವ್ ಶುಕ್ಲಾ ಅವರಿಗಿದೆ. ಇಂದು ಅಹಮದಾಬಾದ್‌ನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅದಿಕೃತವಾಗಿ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಭಾರತ ಕ್ರಿಕೆಟ್ಗೆ ಇದೊಂದು ಅದ್ಭುತ ದಿನ. ಇಂದು ನಾವು ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈ ದಿನದ ಎಜಿಎಂ ನಮ್ಮ ದೇಶದ ಕ್ರಿಕೆಟ್ ಬೆಳವಣಿಗೆಗೆ ಬುನಾದಿ ಹಾಕಿದೆ. ನಾನು ಸದಾ ಭಾರತ ಕ್ರಿಕೆಟ್ ಅನ್ನು ಅಭಿವೃದ್ಧಿ ಪಥದತ್ತ ಸಾಗಿಸುವುದಕ್ಕೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಸಭೆಯಲ್ಲಿ ಐಪಿಎಲ್ಗೆ ಮತ್ತೆರಡು ತಂಡಗಳನ್ನು ಸೇರಿಸುವ ಯೋಜನೆಗೆ ಒಪ್ಪಿಗೆ ಸಿಕ್ಕಿದ್ದು, 2022ರಿಂದ 8 ತಂಡಗಳ ಬದಲಾಗಿ 10 ತಂಡಗಳು ಐಪಿಎಲ್ನಲ್ಲಿ ಆಡಲಿವೆ.