ಹ್ಯಾಮಿಲ್ಟನ್: ಸೀಮಿತ ಓವರ್ಗಳಲ್ಲಿ ಅದ್ಭುತ ಫಾರ್ಮ್ನಲ್ಲಿರುವ ರಾಹುಲ್ ಅವರನ್ನು ಆರಂಭಿಕ ಸ್ಥಾನದಿಂದ ಕೆಳಗಿಳಿಸಿ 5ನೇ ಕ್ರಮಾಂಕದಲ್ಲಿ ಆಡಿಸಿರುವುದಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಟಿ-20 ಸರಣಿಯಲ್ಲಿ ಅತ್ಯುತ್ತಮ ರನ್ಗಳಿಸಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿರುವ ಕೆಎಲ್ ರಾಹುಲ್ ಏಕದಿನ ಸರಣಿಯಲ್ಲಿ ಮಾತ್ರ ದಿಢೀರ್ 5ನೇ ಕ್ರಮಾಂಕದಲ್ಲಿ ಆಡಿಸುತ್ತಿರುವುದು ಉತ್ತಮ ನಿರ್ಧಾರವಲ್ಲ ಎಂದು ಕೊಹ್ಲಿ ಹಾಗೂ ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
"ಭಾರತ ತಂಡದ ಪರ ರಾಹುಲ್ ಜೊತೆ ಮಯಾಂಕ್ ಇನ್ನಿಂಗ್ಸ್ ಆರಂಭಿಸಿ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಬೇಕಿತ್ತು. ರಾಹುಲ್ ಸಹ ವಿಕೆಟ್ ಕೀಪಿಂಗ್ನಲ್ಲಿ ಮೌಲ್ಯವುಳ್ಳ ಆಟಗಾರರಾಗಿದ್ದಾರೆ. ಆದರೆ, ಅದು ಟಿ-20ಯಲ್ಲಿ ಯಶಸ್ವಿಯಾಗುತ್ತದೆ. ಆದರೆ 50 ಓವರ್ಗಳ ಕ್ರಿಕೆಟ್ನಲ್ಲಿ ಅವರಿಂದ ಎರಡು ಜವಾಬ್ದಾರಿಯನ್ನು ನಿರೀಕ್ಷಿಸುವುದು ಉತ್ತಮ ನಿರ್ಣಯವಾಗದು" ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಗಾಯಗೊಂಡಿರುವ ಅನುಭವಿ ಜಾಗಕ್ಕೆ ಯುವ ಆಟಗಾರ ಪೃಥ್ವಿ ಶಾ ಅವರನ್ನು ಆಯ್ಕೆ ಮಾಡಿರುವುದು ಆಯ್ಕೆ ಸಮಿತಿಯ ಧೈರ್ಯದ ನಿರ್ಧಾರ. ಇಂತಹ ತಾತ್ಕಾಲಿಕ ನಿರ್ಧಾರ ಯಶಸ್ವಿಯಾಗಲು ಕೆಲವು ಬಾರಿ ಅದೃಷ್ಟವೂ ಬೇಕಾಗುತ್ತದೆ. ಎ ತಂಡದಲ್ಲಿ ಪೃಥ್ವಿ ನೀಡಿದ ಪ್ರದರ್ಶನದ ಮೇಲೆ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಇಲ್ಲಿ ಪೃಥ್ವಿ ಭಾರತ ಎ ತಂಡಕ್ಕೆ ನೀಡಿದ ಪ್ರದರ್ಶನವನ್ನು ಮುಂದುವರಿಸಿದರೆ ಮಾತ್ರ ಅತಿಥೇಯರ ಸವಾಲನ್ನು ಸುಲಭವಾಗಿ ಸ್ವೀಕರಿಸಲು ಸಾಧ್ಯ ಎಂದಿದ್ದಾರೆ.
ಗಂಭೀರ್ ಅಭಿಪ್ರಾಯವನ್ನು ಪುನರುಚ್ಛರಿಸಿರುವ ಮಾಜಿ ವೇಗಿ ಜಹೀರ್ ಖಾನ್ ಕೂಡ ಏಕದಿನ ಕ್ರಿಕೆಟ್ನಲ್ಲಿ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ನೋಡುವುದನ್ನು ಬಯಸುವುದಿಲ್ಲ ಎಂದಿದ್ದಾರೆ. ಅವರು ಆರಂಭಿಕನಾಗಿ ಆಡಬೇಕು, ಅಲ್ಲದೇ 50 ಓವರ್ಗಳ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡುವುದು ಅವರಿಗೆ ಕಷ್ಟದ ಕೆಲಸವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಕಿವೀಸ್ ವಿರುದ್ಧ 5 ಟಿ-20 ಪಂದ್ಯಗಳಿಂದ ಆರಂಭಿಕನಾಗಿ 224 ರನ್ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಮೊದಲ ಏಕದಿ ಪಂದ್ಯದಲ್ಲಿ 64 ಎಸೆತಗಳಲ್ಲಿ 88 ರನ್ಗಳಿಸಿ ಮಿಂಚಿದ್ದಾರೆ.