ಬೆಂಗಳೂರು: ಭಾರತ ಕ್ರಿಕೆಟ್ ಕಂಡಂತಹ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್ 14 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯಲ್ಲಿ ದಿನದಿಂದ ದಿನಕ್ಕೆ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ.
ಡಿಸೆಂಬರ್ 20, 2019ರಂದು ನಡೆದಿದ್ದ ಇಂಟರ್ ಜೋನಾಲ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಧಾರವಾಡ ಜೋನ್ ವಿರುದ್ಧ ದ್ವಿಶತಕ ಸಿಡಿಸಿ ಮಿಂಚಿದ್ದ ಸಮಿತ್, ಇಂದು ನಡೆದ ಬಿಟಿಆರ್ ಶೀಲ್ಡ್ ಅಂಡರ್ 14 ವಿಭಾಗದ ಪಂದ್ಯದಲ್ಲಿ ತಮ್ಮ ಮಲ್ಯ ಅದಿತಿ ಇಂಟರ್ ನ್ಯಾಷನಲ್ ತಂಡದ ಪರ ಅಬ್ಬರದ ದ್ವಿಶತಕ ಸಿಡಿಸಿದ್ದಾರೆ.
ಈ ಪಂದ್ಯದಲ್ಲಿ ಸಮಿತ್ ಕೇವಲ 146 ಎಸೆತಗಳಲ್ಲಿ ಬರೋಬ್ಬರಿ 33 ಬೌಂಡರಿಗಳ ಸಹಿತ 201ರನ್ ಗಳಿಸಿದ್ದಾರೆ. ಇವರ ದ್ವಿಶತಕದ ನೆರವಿನಿಂದ ಅದಿತಿ ಮಲ್ಯ ಅದಿತಿ ಇಂಟರ್ ನ್ಯಾಷನಲ್ ತಂಡ 50 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 377 ರನ್ ಗಳಿಸಿತು. ಇದಕ್ಕುತ್ತರವಾಗಿ ಶ್ರೀ ಕುಮಾರನ್ ಚಿಲ್ಡ್ರನ್ಸ್ ಅಕಾಡೆಮಿ ತಂಡ 110 ರನ್ಗಳಿಗೆ ಆಲೌಟ್ ಆಗುವ ಮೂಲಕ 267 ರನ್ಗಳ ಹೀನಾಯ ಸೋಲುಂಡಿದೆ.
ಬ್ಯಾಟಿಂಗ್ನಲ್ಲಿ ಮಿಂಚಿದ ಸಮಿತ್ ಬೌಲಿಂಗ್ನಲ್ಲೂ ಕಮಾಲ್ ಮಾಡಿ 2 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡು ತಿಂಗಳ ಹಿಂದೆ ಇಂಟರ್ ಜೋನಾಲ್ ಟೂರ್ನಿಯಲ್ಲಿ ಎರಡು ಇನ್ನಿಂಗ್ಸ್ ಸೇರಿ 295 ರನ್ ಹಾಗೂ 3 ವಿಕೆಟ್ ಪಡೆದು ಕ್ರಿಕೆಟ್ ಜಗತ್ತಿಗೆ ಅಪ್ಪನಿಗೆ ತಕ್ಕ ಮಗ ಎಂದು ಸಾಬೀತು ಪಡಿಸಿದ್ದರು.