ಆ್ಯಂಟಿಗುವಾ: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಆರಂಭಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಲ್ರೌಂಡರ್ ಹಾಗೂ ಟೆಸ್ಟ್ನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು(ಸದ್ಯದ ತಂಡ) ವಿಕೆಟ್ ಪಡೆದುಕೊಂಡಿರುವ ಪ್ಲೇಯರ್ ಆರ್.ಅಶ್ವಿನ್ ತಂಡದಿಂದ ಕೈಬಿಟ್ಟಿರುವ ವಿಚಾರ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ಅನೇಕರು ಕ್ಯಾಪ್ಟನ್ ಕೊಹ್ಲಿ ಹಾಗೂ ಕೋಚ್ ಶಾಸ್ತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೀಗ ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಇದೇ ವಿಷಯವಾಗಿ ಮಾತನಾಡಿದ್ದಾರೆ. ತಂಡ ಅಶ್ವಿನ್ರಂತಹ ಪ್ಲೇಯರ್ ಆಡುವ 11ರ ಬಳಗದಿಂದ ಕೈಬಿಟ್ಟಾಗ ನಿಜಕ್ಕೂ ಕಷ್ಟವಾಗುತ್ತದೆ. ಆದರೆ ನಾವು ಮೈದಾನಕ್ಕಿಳಿದಾಗ ತಂಡದ ಮ್ಯಾನೇಜ್ಮೆಂಟ್ ಉತ್ತಮ ಕಾಂಬಿನೇಷನ್ಗಾಗಿ ಮಣೆ ಹಾಕುತ್ತದೆ. ಆರನೇ ಕ್ರಮಾಂಕದಲ್ಲಿ ಬ್ಯಾಟ್ಸಮನ್ ಯಾರು ಎಂದು ನೋಡಿದಾಗ ಜಡೇಜಾ ಆಯ್ಕೆ ಉತ್ತಮ ಎಂದು ಭಾವಿಸಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ.
ಈ ಟ್ರ್ಯಾಕ್ನಲ್ಲಿ ಹನುಮ ವಿಹಾರಿ ಕೂಡ ಬೌಲ್ ಮಾಡಬಹುದು. ಹೀಗಾಗಿ ಕ್ಯಾಪ್ಟನ್ ಮತ್ತು ಕೋಚ್ ಸೇರಿ ಈ ನಿರ್ಧಾರ ಕೈಗೊಂಡರು ಎಂದು ತಿಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ಅಶ್ವಿನ್ 11 ಟೆಸ್ಟ್ ಪಂದ್ಯಗಳಿಂದ 60 ವಿಕೆಟ್ ಕಬಳಿಸಿದ್ದು, 552 ರನ್ ಮಾಡಿದ್ದಾರೆ. ಆದರೆ ನಿನ್ನೆಯಿಂದ ಆರಂಭಗೊಂಡಿರುವ ಟೆಸ್ಟ್ ಪಂದ್ಯದಿಂದ ಅವರನ್ನು ಕೈಬಿಟ್ಟಿದ್ದು ಕೆಲ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಆರಂಭಗೊಂಡಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ. ಅದ್ಭುತವಾಗಿ ಬ್ಯಾಟ್ ಬೀಸಿದ ರಹಾನೆ 81 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.