ಶಿವಮೊಗ್ಗ: ಕ್ವಾರ್ಟರ್ ಫೈನಲ್ ಪ್ರವೇಶಿಸಲು ಪ್ರಮುಖವಾದ, ಮಧ್ಯಪ್ರದೇಶದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಅನುಭವಿ ಆಟಗಾರ ಆರ್ ಸಮರ್ಥ್ ಕರ್ನಾಟಕ ತಂಡಕ್ಕೆ ಮೊದಲ ದಿನದ ಗೌರವ ತಂದು ಕೊಟ್ಟಿದ್ದಾರೆ.
ಟಾಸ್ ಗೆದ್ದ ಮಧ್ಯಪ್ರದೇಶ ಫೀಲ್ಡಿಂಗ್ ಆಯ್ದುಕೊಂಡು, ಕರ್ನಾಟಕ ತಂಡವನ್ನು ಬ್ಯಾಟಿಂಗ್ಗೆ ಅಹ್ವಾನಿಸಿ ಆರಂಭಿಕ ಯಶಸ್ಸು ಸಾಧಿಸಿತು. ಮೊದಲಿಗೆ ಕರ್ನಾಟಕ ತಂಡದ ಯಶಸ್ವಿ ಬ್ಯಾಟ್ಸ್ಮನ್ ಆಗಿದ್ದ ದೇವದತ್ ಪಡಿಕ್ಕಲ್(0) ವಿಕೆಟ್ ಪಡೆಯುವಲ್ಲಿ ಮಧ್ಯಪ್ರದೇಶದ ರವಿ ಯಾದವ್ ಯಶಸ್ವಿಯಾದರು. ಇವರ ಬೆನ್ನಲ್ಲೇ ಬಂದ ರೋಹನ್ ಕದಂ(9) ರನ್ಗಳಿಸಿ ಗೌರವ್ ಯಾದವ್ಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ನಾಯಕ ಕರುಣ್ ನಾಯರ್(22) ಸಮರ್ಥ್ ಜೊತೆ ಸೇರಿ 48 ರನ್ ಸೇರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಕರುಣ್ 72 ಎಸೆತಗಳನ್ನೆದುರಿಸಿದರೂ ಕೇವಲ 22 ರನ್ಗಳಿಸಿ ಕುಲ್ದೀಪ್ ಸೇನ್ಗೆ ವಿಕೆಟ್ ಒಪ್ಪಿಸಿ ಕರ್ನಾಟಕದ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.
ಸಮರ್ಥ್-ಸಿದ್ಧಾರ್ಥ್ 150 ರನ್ಗಳ ಜೊತೆಯಾಟ
83 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಮಯದಲ್ಲಿ ಒಂದಾದ ರವಿಕುಮಾರ್ ಸಮರ್ಥ್ ಹಾಗೂ ಸಿದ್ಧಾರ್ಥ್ ಕೆವಿ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 150 ರನ್ ಸೇರಿಸಿದರು. 278 ಎಸೆತಗಳನ್ನು ಎದುರಿಸಿದ ಸಮರ್ಥ್ 105 ರನ್ಗಳಿಸಿದರು. ಸಿದ್ಧಾರ್ಥ್ 130 ಎಸೆತಗಳಲ್ಲಿ 7 ಬೌಂಡರಿ ಸಹಿತ 62 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.