ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿದ್ದ ಫೈನಲ್ ಪಂದ್ಯದ ವೇಳೆ ಅಪರೂಪದ ಘಟನೆಯೊಂದು ನಡೆದಿದ್ದು, ಏಕಾಏಕಿ ಮೈದಾನಕ್ಕೆ ನುಗ್ಗಿರುವ ಯುವಕನೊಬ್ಬ ದಕ್ಷಿಣ ಆಫ್ರಿಕಾದ ಕ್ರಿಕೆಟರ್ ಕ್ವಿಂಟನ್ ಡಿಕಾಕ್ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ.
ಈ ಹಿಂದೆ ವಿಶಾಖಪಟ್ಟಣದಲ್ಲಿ ನಡೆದಿದ್ದ ಪಂದ್ಯದ ವೇಳೆ ರೋಹಿತ್ ಶರ್ಮಾ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ವೇಳೆ ಏಕಾಏಕಿ ಮೈದಾನಕ್ಕೆ ನುಗ್ಗಿದ್ದ ವ್ಯಕ್ತಿಯೊಬ್ಬ ರೋಹಿತ್ ಶರ್ಮಾ ಕಾಲಿಗೆ ಬಿದಿದ್ದರು. ಈ ವೇಳೆ ಆಯಾತಪ್ಪಿದ ಹಿಟ್ಮ್ಯಾನ್ ಕೆಳಗೆ ಬಿದ್ದಿದ್ದರು. ಅದ್ಯ ಜಾರ್ಖಂಡ್ನ ರಾಂಚಿ ಮೈದಾನದಲ್ಲಿ ನಡೆಯುತ್ತಿದ್ದ ಟೆಸ್ಟ್ ಪಂದ್ಯದಲ್ಲೂ ಇಂತಹ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸೆಕ್ಯುರಿಟಿಗಳ ಕಣ್ಣು ತಪ್ಪಿಸಿ ಮೈದಾನದೊಳಗೆ ನುಗ್ಗಿರುವ ವ್ಯಕ್ತಿ ನೇರವಾಗಿ ಕ್ವಿಂಟನ್ ಡಿಕಾಕ್ ಬಳಿ ಹೋಗಿ ಅವರನ್ನ ತಬ್ಬಿಕೊಂಡಿದ್ದು, ತದನಂತರ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಇದಾದ ಬಳಿಕ ಸೆಕ್ಯುರಿಟಿ ಆತನನ್ನು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಈ ಘಟನೆಯ ಫೋಟೋ ವೈರಲ್ ಆಗುತ್ತಿದ್ದಂತೆ ಇಂತಹ ಘಟನೆ ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕ್ವಿಂಟನ್ ಡಿಕಾಕ್ ತಮಗೂ ಭಾರತದಲ್ಲಿ ಅಭಿಮಾನಿಗಳಿರುವರೇ ಎಂದು ಆಶ್ಚರ್ಯಕ್ಕೊಳಗಾಗಿದ್ದಾರೆ.