ನವದೆಹಲಿ: ಕಡಿಮೆ ಸ್ಟ್ರೈಕ್ರೇಟ್ ಇದ್ದರೂ ಎದುರಾಳಿ ಆಟಗಾರರನ್ನು ಕಾಡುವ ಕೆಲವೇ ಕೆಲವು ಆಟಗಾರರಲ್ಲಿ ಟೀಂ ಇಂಡಿಯಾ ಟೆಸ್ಟ್ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಕೂಡ ಒಬ್ಬರು ಎಂದು ಆಸ್ಟ್ರೇಲಿಯಾ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
2018-19ರ ಸರಣಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಪೂಜಾರ 3 ಶತಕಗಳ ನೆರವಿನಿಂದ 521 ರನ್ ಗಳಿಸಿ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದಿದ್ದರು. ಟೀಂ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ತಮ್ಮಲ್ಲೇ ಉಳಿಸಿಕೊಳ್ಳುವ ಯೋಜನೆಯಲ್ಲಿದ್ದು, ಭಾರತ ತಂಡಕ್ಕೆ ಅವರೊಬ್ಬ ಪ್ರಮುಖ ಆಟಗಾರರಾಗಿದ್ದಾರೆ. ಮೊದಲ ಟೆಸ್ಟ್ ಮುಗಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ ನಂತರ ಅವರ ಪಾತ್ರವು ಹೆಚ್ಚು ನಿರ್ಣಾಯಕವಾಗುತ್ತದೆ ಎಂದಿದ್ದಾರೆ
"ನಾವು ಹೆಚ್ಚು ಸ್ಟ್ರೈಕ್ರೇಟ್ನೊಂದಿಗೆ ಬ್ಯಾಟಿಂಗ್ ಮಾಡುವ ಆಟಗಾರರನ್ನು ಇಷ್ಟ ಪಡುವ ಪೀಳಿಗೆಯಲ್ಲಿದ್ದೇವೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 45ಕ್ಕಿಂತ ಕಡಿಮೆ ಸ್ಟ್ರೈಕ್ರೇಟ್ ಹೊಂದಿದ ಕೆಲವೇ ಕೆಲವು ಆಟಗಾರರಲ್ಲಿ ಪೂಜಾರ ಕೂಡ ಒಬ್ಬರು. ಅವರು ನಿಮ್ಮನ್ನು ಹೆಚ್ಚು ಕಾಡಿಸಬಹುದು" ಎಂದು ಹೇಳಿದ್ದಾರೆ.
ಪೂಜಾರಾ ಇದುವರೆಗೆ 77 ಟೆಸ್ಟ್ ಪಂದ್ಯಗಳಲ್ಲಿ 18 ಶತಕಗಳ ಸಹಾಯದಿಂದ 5,840 ರನ್ ಗಳಿಸಿದ್ದಾರೆ. ಅವರು 46.19 ರ ಸ್ಟ್ರೈಕ್ರೇಟ್ ಹೊಂದಿದ್ದಾರೆ. "ಎದುರಾಳಿ ಬೌಲರ್‌ಗಳನ್ನು ಆಯಾಸಗೊಳಿಸುವ ಸಾಮರ್ಥ್ಯವು ಅವರನ್ನು ಭಾರತೀಯ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿಸುತ್ತದೆ" ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.