ಮುಂಬೈ: 2020ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡದ ಪಾಲಾಗಿದ್ದ 48 ವರ್ಷದ ಪ್ರವೀಣ್ ತಾಂಬೆ ಈ ಬಾರಿಯ ಐಪಿಎಲ್ನಲ್ಲಿ ಆಡಲು ಅನರ್ಹರಾಗಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಹಿರಿಯ ಕ್ರಿಕೆಟಿಗನಾಗಿ ಕಾಣಿಸಿಕೊಂಡಿದ್ದ ಪ್ರವೀಣ್ ತಾಂಬೆ 2020ರ ಐಪಿಎಲ್ಗೆ ನಡೆದ ಹರಾಜಿನಲ್ಲಿ 20 ಲಕ್ಷಕ್ಕೆ ಕೆಕೆಆರ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಆದರೆ ಅವರು ಬಿಸಿಸಿಐ ನಿಯಮವನ್ನು ಮುರಿದು ನಿವೃತ್ತಿಗೂ ಮೊದಲೇ ವಿದೇಶಿ ಲೀಗ್ನಲ್ಲಿ ಆಡಿದ್ದರಿಂದ ಅವರು ಐಪಿಎಲ್ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಚಿತಪಡಿಸಿದ್ದಾರೆ. ತಾಂಬೆ ಅಬುಧಾಬಿ ಟಿ10 ಲೀಗ್ನಲ್ಲಿ ಕಳೆದೆರಡು ಆವೃತ್ತಿಗಳಲ್ಲಿ ಆಡಿದ್ದರು.
ಪ್ರವೀಣ್ ತಾಂಬೆ 2013-2016 ರಿಂದ ರಾಜಸ್ಥಾನ್ ರಾಯಲ್ಸ್ , ಗುಜರಾತ್ ಲಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಇವರು 33 ಪಂದ್ಯಗಳಿಂದ 28 ವಿಕೆಟ್ ಪಡೆದಿದ್ದು, 2014ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 15 ವಿಕೆಟ್ ಪಡೆದಿದ್ದು ಇವರ ಶ್ರೇಷ್ಠ ಸಾಧನೆಯಾಗಿದೆ.
ಇಂಗ್ಲೆಂಡ್ನಲ್ಲಿ ನಡೆಯಲಿರುವ ಹೊಸ ಲೀಗ್ಗೆ ಭಾರತದಿಂದ ಹರ್ಭಜನ್ ಸಿಂಗ್ ಆಯ್ಕೆಯಾಗಿದ್ದರು. ಆದರೆ ಈ ಬಾರಿಯೂ ಐಪಿಎಲ್ ಆಡಬೇಕೆಂದ ಆಶಯದಿಂದ ತಮ್ಮ ಹೆಸರನ್ನು ವಾಪಸ್ ತೆಗೆದುಕೊಂಡಿದ್ದರು. ಅವರೂ ಕೂಡ 2016ರಿಂದ ಭಾರತ ತಂಡದ ಪರ ಯಾವುದೇ ವಿಭಾಗದ ಕ್ರಿಕೆಟ್ ಆಡಿಲ್ಲ. ಇನ್ನು ಯುವರಾಜ್ ಕೂಡ ವಿದೇಶಿ ಲೀಗ್ನಲ್ಲಿ ಆಡುವ ಉದ್ದೇಶದಿಂದ ನಿವೃತ್ತಿ ಘೋಷಿಸಿದ್ದರು. ಕೆನಡಾ ಗ್ಲೋಬಲ್ಟಿ20 ಹಾಗೂ ಟಿ10 ಲೀಗ್ನಲ್ಲಿ ಆಡಿದ್ದರಿಂದ ಅವರೂ ಕೂಡ 2020ರ ಐಪಿಎಲ್ನಲ್ಲಿ ಪಾಲ್ಗೊಳ್ಳುವಂತಿಲ್ಲ.