ಲಾಹೋರ್( ಪಾಕಿಸ್ತಾನ): ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ದಿಢೀರ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, 2021ರ ವಿಶ್ವಕಪ್ನಲ್ಲಿ ಆಡುವಂತೆ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಬಹುದು ಎಂದು ಅಭಿಪ್ರಾಯ ಹೊರಹಾಕಿದ್ದಾರೆ.
ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಅಖ್ತರ್, ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ನಲ್ಲಿ ಅವರು ಭಾಗಿಯಾಗಬಹುದು. ಆದರೆ ಇದು ಅವರ ವೈಯಕ್ತಿಕ ವಿಚಾರವಾಗಿದೆ ಎಂದಿದ್ದಾರೆ.
ಏನು ಹೇಳಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ, 2021ರ ವಿಶ್ವಕಪ್ನಲ್ಲಿ ಆಡಲು ವಿನಂತಿ ಮಾಡಬಹುದು. ಈ ಹಿಂದೆ ಇಮ್ರಾನ್ ಖಾನ್ ಅವರನ್ನ ಜನರಲ್ ಜಿಯಾ - ಉಲ್- ಹಕ್ ಅವರು 1987ರಲ್ಲಿ ಕ್ರಿಕೆಟ್ ನಿವೃತ್ತಿ ಪಡೆದುಕೊಳ್ಳದಂತೆ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ ಅವರು ದೇಶಕ್ಕಾಗಿ ಮತ್ತೆ ಆಡಿದರು ಎಂದಿದ್ದಾರೆ.
ರಾಂಚಿಯಿಂದ ಬಂದ ವ್ಯಕ್ತಿಯೊಬ್ಬ ಈಗಾಗಲೇ ವಿಶ್ವದಾದ್ಯಂತ ಹೆಸರು ಮಾಡಿದ್ದಾರೆ. ಪ್ರಧಾನಮಂತ್ರಿ ಕೋರಿಕೆ ಮೇರೆಗೆ ಆವರು ಮತ್ತೊಮ್ಮೆ ಪುನರಾಗಮನ ಮಾಡಬಹುದು ಎಂದು ಅಖ್ತರ್ ಹೇಳಿದ್ದಾರೆ.
39 ವರ್ಷದ ಮಹೇಂದ್ರ ಸಿಂಗ್ ಧೋನಿ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, 350 ಏಕದಿನ, 90 ಟೆಸ್ಟ್ ಹಾಗೂ 98 ಟಿ-20 ಪಂದ್ಯಗಳನ್ನಾಡಿದ್ದಾರೆ. ಇವರ ನಾಯಕತ್ವದಲ್ಲೇ ಟೀಂ ಇಂಡಿಯಾ ಐಸಿಸಿಯ ಎಲ್ಲ ಟ್ರೋಫಿ ಗೆದ್ದಿದೆ. ಈ ಸಾಧನೆ ಮಾಡಿರುವ ಏಕೈಕ ನಾಯಕ ಎಂಬ ಖ್ಯಾತಿ ಕೂಡ ಅವರು ಗಳಿಸಿದ್ದಾರೆ.
ಧೋನಿ ನಾಯಕತ್ವದಲ್ಲಿ ಭಾರತ 2007 ಟಿ - 20 ವಿಶ್ವಕಪ್, 2010 ಮತ್ತು 2016 ಏಷ್ಯಾ ಕಪ್, 2011 ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.
ಕಳೆದ ಜುಲೈ ತಿಂಗಳಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಪರ ಕೊನೆಯದಾಗಿ ಆಡಿದ್ದರು. ಸದ್ಯ ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ಗೋಸ್ಕರ ಅವರು ಅಭ್ಯಾಸ ಆರಂಭಿಸಿದ್ದಾರೆ.