ನವದೆಹಲಿ: ಪಿಸಿಬಿ ಅಧ್ಯಕ್ಷರು ಮೊದಲು ಪಾಕಿಸ್ತಾನದಲ್ಲಿನ ಭದ್ರತೆಯ ಬಗ್ಗೆ ಚಿಂತಿಸಲಿ. ಭಾರತದಲ್ಲಿನ ಭದ್ರತೆ ಬಗ್ಗೆ ಆತಂಕ ಪಡುವುದು ಬೇಡ ಎಂದು ಬಿಸಿಸಿಐ ಉಪಾಧ್ಯಕ್ಷ ಮಹಿಮ್ ವರ್ಮಾ ಎಹ್ಸಾನ್ ಮಣಿಗೆ ತಿರುಗೇಟು ನೋಡಿದ್ದಾರೆ.
"ಅವರು (ಪಿಸಿಬಿ ಅಧ್ಯಕ್ಷ) ಮೊದಲು ಅವರ ಸ್ವಂತ ದೇಶದಲ್ಲಿನ ಭದ್ರತಾ ವ್ಯವಸ್ಥೆ ನೋಡಿಕೊಳ್ಳಲಿ ಹಾಗೂ ಅದರ ಬಗ್ಗೆ ಚಿಂತಿಸಲಿ, ನಮ್ಮ ದೇಶ ಸುರಕ್ಷಿತವಾಗಿದೆ ಹಾಗೂ ಆಟಗಾರರ ಭದ್ರತೆ ನಿಭಾಯಿಸಿಕೊಳ್ಳುವಲ್ಲಿ ನಾವು ಸಾಕಷ್ಟು ಸಮರ್ಥರಾಗಿದ್ದೇವೆ" ಎಂದು ಮಹಿಮ್ ವರ್ಮಾ ತಿರುಗೇಟು ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷ ಎಹ್ಸಾನ್ ಮಣಿ "ಪಾಕಿಸ್ತಾನಕ್ಕಿಂತ ಭಾರತದಲ್ಲಿ ಭದ್ರತೆಯ ಸಮಸ್ಯೆ ಇದೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಇನ್ಮುಂದೆ ತವರಿನ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ಆಡುತ್ತೇವೆ, ಪಾಕಿಸ್ತಾನ ಅಸುರಕ್ಷಿತ ಎಂದು ಹೇಳುವವರು ನಮ್ಮ ದೇಶ ಹೇಗೆ ಅಸುರಕ್ಷಿತ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ" ಎಂದು ಸವಾಲು ಹಾಕಿದ್ದರು.
ಇತ್ತೀಚೆಗೆ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ಪಿಸಿಬಿ ಅತ್ಯುತ್ತಮ ಭದ್ರತಾ ವ್ಯವಸ್ಥೆ ಕಲ್ಪಿಸಿತ್ತು. ಇದಕ್ಕೆ ಅಲ್ಲಿನ ಅಭಿಮಾನಿಗಳು ಹಾಗೂ ಮಾಧ್ಯಮ ಉತ್ತಮ ಸಹಕಾರ ನೀಡಿದ್ದವು. ಪಾಕಿಸ್ತಾನ ತಂಡ ಟೆಸ್ಟ್ ಸರಣಿಯನ್ನು 1-0ಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.