ಹೈದರಾಬಾದ್: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅವಕಾಶ ನೀಡಿದರೆ ಭಾರತ ತಂಡ ಏಷ್ಯಾ ಕಪ್‌ನ ಲೀಗ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ವಾಸಿಮ್ ಖಾನ್ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಏಷ್ಯಾ ಕಪ್ ಟಿ-20 ಪಂದ್ಯಾವಳಿ ಆಯೋಜಿಸಲಿದೆ. ಆದರೆ ಸದ್ಯದ ರಾಜಕೀಯ ಕಾರಣಗಳಿಂದ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಬೇಕು ಎಂಬ ಮಾತು ಕೇಳಿಬರುತ್ತಿವೆ.
ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ನಲ್ಲಿ ಭಾರತ ಪಾಲ್ಗೊಳ್ಳದೇ ಇದ್ದರೆ 2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ಪಾಕಿಸ್ತಾನ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಖಾನ್ ನಿರಾಕರಿಸಿದ್ದು, ಪಾಕಿಸ್ತಾನವು ಭಾರತ ಪ್ರವಾಸ ಮಾಡುವುದಿಲ್ಲ ಎಂದು ನಾವು ಯಾವ ಹಂತದಲ್ಲೂ ಹೇಳಲಿಲ್ಲ ಎಂದಿದ್ದಾರೆ.
ಭಾರತ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಒಪ್ಪದಿದ್ದರೆ ಏನು ಮಾಡಬೇಕು ಎಂದು ನಿರ್ಧಾರ ಮಾಡಬೇಕಿರುವುದು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ (ಎಸಿಸಿ) ಕೆಲಸ. ನಮಗೆ ಟೂರ್ನಿ ಆಯೋಜನೆಯ ಹಕ್ಕುಗಳು ದೊರೆತಿರುವುದರಿಂದ ಏಷ್ಯಾ ಕಪ್ ಪಾಕಿಸ್ತಾನದಲ್ಲಿ ನಡೆಯಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಭಾರತ ಪಂದ್ಯಗಳನ್ನು ಎಲ್ಲಿ ಆಡಬೇಕು ಎಂಬ ಬಗ್ಗೆ ಎಸಿಸಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಖಾನ್ ಹೇಳಿದ್ದಾರೆ.
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯ ನಡೆಯುವ ಸಂದರ್ಭ ಎದುರಾದರೆ ಪಂದ್ಯವನ್ನು ಎಲ್ಲಿ ನಡೆಸಬೇಕು ಎಂಬುದನ್ನು ಎಸಿಸಿ ನಿರ್ಧಾರ ಮಾಡಬೇಕಿದೆ. ಇಲ್ಲಿಯವರೆಗೆ ಟೂರ್ನಿಯ ಸ್ವರೂಪ ಮತ್ತು ವೇಳಾಪಟ್ಟಿಯ ಕುರಿತು ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ.