ಮೊಹಾಲಿ: ನೂತನ ಬ್ಯಾಟಿಂಗ್ ತರಬೇತುದಾರ ವಿಕ್ರಮ್ ರಾಥೋರ್, ಕೋಚ್ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಎಚ್ಚರಿಸಿದ್ದಾರೆ.
ವೆಸ್ಟ್ ಇಂಡೀಸ್ ಸರಣಿ ವೇಳೆ ಕಳಪೆ ಪ್ರದರ್ಶನ ತೋರಿದ ರಿಷಭ್ ಪಂತ್ ಪ್ರಸ್ತುತ ಸರಣಿಯಲ್ಲೂ ಬ್ಯಾಟಿಂಗ್ ವೈಫಲ್ಯತೆ ಅನುಭವಿಸಿದ್ರೆ ಹೊಸ ವಿಕೆಟ್ ಕೀಪರ್ ಹುಡುಕಬೇಕಾಗುತ್ತದೆ ಎಂದು ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ, ಬ್ಯಾಟಿಂಗ್ ಕೋಚ್ ರಾಥೋರ್ ಕೂಡ ಪಂತ್ ಮೊದಲು ಭಯರಹಿತ ಕ್ರಿಕೆಟ್ ಹಾಗೂ ನಿರ್ಲಕ್ಷ್ಯ ಕ್ರಿಕೆಟ್ ನಡುವಿನ ವ್ಯತ್ಯಾಸ ತಿಳಿದುಕೊಳ್ಳಬೇಕು ಎಂದು ಬುದ್ದಿವಾದ ಹೇಳಿದ್ದಾರೆ.
ಪಂತ್ ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸುವ ಬದಲು ಯಾವಾಗಲೂ ಆಕ್ರಮಣಾತ್ಮಕ ಆಟಕ್ಕೆ ಮುಂದಾಗಿ ವಿಕೆಟ್ ಕೈ ಚೆಲ್ಲುತ್ತಿದ್ದಾರೆ. ಇದರ ಪರಿಣಾಮ ತಂಡದ ಮೇಲಾಗುತ್ತಿದೆ. ಹೀಗಾಗಿ ಪಂತ್ ಪ್ರದರ್ಶನದ ಮೇಲೆ ತಂಡದ ಮಂಡಳಿಗೆ ತೃಪ್ತಿಯಿಲ್ಲ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವಿಫಲರಾದರೆ ಮುಂದೆ ತಂಡದಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಆದರೆ ಪಂತ್ ತಮ್ಮ ನೈಜ ಆಟದಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ಅವರು ತಮ್ಮ ಆಟದಲ್ಲೇ ಶಿಸ್ತು ಕಾಪಾಡಿಕೊಳ್ಳಬೇಕಿದೆ ಎಂದು ರಾಥೋರ್ ಅಭಿಪ್ರಾಯ ಪಟ್ಟರು.