ಬ್ರಿಸ್ಬೇನ್ : ರಿಷಭ್ ಪಂತ್ ಒಬ್ಬ ಮ್ಯಾಚ್ ವಿನ್ನರ್. ಅದಕ್ಕಾಗಿ ಅವರ ವಿಕೆಟ್ ಕೀಪಿಂಗ್ ಹಲವಾರು ಬಾರಿ ಟೀಕೆಗೆ ಗುರಿಯಾದ್ರೂ ವಿದೇಶಿ ಸರಣಿಗಳಲ್ಲಿ ಆತನಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಸೀಸ್ ಪ್ರಬಲ ದಾಳಿಯನ್ನು ಕೆಚ್ಚೆದೆಯಿಂದ ದಂಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆಂದು ರವಿಶಾಸ್ತ್ರಿ ಯುವ ಆಟಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸರಣಿ ನಿರ್ಧರಿಸುವ ನಾಲ್ಕನೇ ಟೆಸ್ಟ್ನಲ್ಲಿ ಪ್ರಬುದ್ಧತೆಯಿಂದ ಬ್ಯಾಟಿಂಗ್‌ನಲ್ಲಿ 89 ರನ್ಗಳಿಸುವ ಮೂಲಕ ಭಾರತಕ್ಕೆ 3 ವಿಕೆಟ್ಗಳ ಐತಿಹಾಸಿ ಜಯ ತಂದುಕೊಟ್ಟರು. ನಾವು ಪಂತ್ರನ್ನು ವಿದೇಶದಲ್ಲಿ ಆಡಿಸುತ್ತೇವೆ. ಯಾಕೆಂದರೆ, ಅವರು ಮ್ಯಾಚ್ ವಿನ್ನರ್. ಆತ ಉತ್ತಮವಾಗಿ ಕೀಪಿಂಗ್ ಮಾಡದಿದ್ದಾಗಲೆಲ್ಲಾ ಜನರು ಟೀಕಿಸುತ್ತಾರೆ.
ಆದರೆ, ಅವರು ಇಂತಹ ಪಂದ್ಯಗಳಲ್ಲಿ ಜಯ ಸಾಧಿಸಲು ನೆರವಾಗುತ್ತಾರೆ. ಸಿಡ್ನಿ ಪಂದ್ಯದಲ್ಲೂ ಸಾಕಷ್ಟು ಸಮಯ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಡ್ರಾ ಮಾಡಿಸಲು ನೆರವಾಗಿದ್ದರು. ಇದೀಗ ಈ ಪಂದ್ಯದಲ್ಲಿ ಜಯ ತಂದುಕೊಟ್ಟಿದ್ದಾರೆ. ಆತ ಅದ್ಭುತ ಪ್ರತಿಭೆ, ಹಾಗಾಗಿ ನಾವು ಅವನಿಗೆ ಸದಾ ಬೆಂಬಲ ನೀಡುತ್ತೇವೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಸರಣಿಯಲ್ಲಿ ಕೇವಲ 36 ರನ್ಗಳಿಗೆ ಆಲೌಟ್ ಆಗಿ ಭಾರಿ ಅಪಮಾನಕ್ಕೀಡಾಗಿದ್ದ ತಂಡ ಮತ್ತೆ ಬೌನ್ಸ್ ಬ್ಯಾಕ್ ಆದ ರೀತಿಯನ್ನು ಶಾಸ್ತ್ರಿ ಶ್ಲಾಘಿಸಿದ್ದಾರೆ.
"ಹುಡುಗರು ತುಂಬಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರ ಬಗ್ಗೆ ಹೇಳಲು ನನ್ನಲ್ಲಿ ಪದಗಳಿಲ್ಲ. 36ಕ್ಕೆ ಆಲೌಟ್ ಆದ ನಂತರ ಈ ಸರಣಿಯಲ್ಲಿ ಮತ್ತೆ ಈ ರೀತಿ ಹಿಂದಿರುಗುವುದರ ಹಿಂದೆ ತಂಡದ ಪಾತ್ರ ಅದ್ಭುತವಾಗಿತ್ತು" ಎಂದು ಶಾಸ್ತ್ರಿ ಹೇಳಿದ್ದಾರೆ.
ಇದನ್ನು ಓದಿ:ಈ ಗೆಲುವು ನನ್ನ ಜೀವನದಲ್ಲೇ ಅತ್ಯಂತ ಶ್ರೇಷ್ಠ ಕ್ಷಣ : ರಿಷಭ್ ಪಂತ್