ಭಾರತ ಕ್ರಿಕೆಟ್ ತಂಡ 2011ರ ವಿಶ್ವಕಪ್ ಎತ್ತಿಹಿಡಿಯುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಸ್ಟಾರ್ ಆಲ್ ರೌಂಡರ್ ಯುವರಾಜ್ ಸಿಂಗ್ ಹಲವು ಏಳುಬೀಳುಗಳನ್ನು ಕಂಡಿದ್ದರು. ಕ್ಯಾನ್ಸರ್ನಿಂದಾಗಿ ಕ್ರಿಕೆಟ್ ಲೋಕದಿಂದ ದೂರಾಗಿದ್ದ ಯುವಿ, ಬಳಿಕ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದರು.
ಆದರೆ ಯುವರಾಜ್ ಸಿಂಗ್ ಜೀವನದ ಕ್ರಿಕೆಟ್ ಇತಿಹಾಸದಲ್ಲಿ ಈ ಒಂದು ದಿನ ಎಂದೂ ಮರೆಯಲಾಗದ ದಿನವಾಗಿದೆ. ಕೇವಲ ಯುವರಾಜ್ ಸಿಂಗ್ ಮಾತ್ರವಲ್ಲ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಮೆರೆಯಲಾಗದ ದಿನವಾಗಿದೆ. 2011ರ ವಿಶ್ವಕಪ್ ಪಂದ್ಯದ ವೇಳೆ ಯುವರಾಜ್ ಸಿಂಗ್ ಸಿಡಿಸಿದ್ದ ಶತಕ ಭಾರತ ವಿಶ್ವಕಪ್ ಗೆಲುವಿಗೂ ಕಾರಣವಾಗಿತ್ತು. ಆದರೆ ಈ ಶತಕದ ಹಿಂದೆ ಯುವರಾಜ್ ಸಿಂಗ್ ಜೀವನದ ಕಹಿ ಘಟನೆಯೊಂದು ನಡೆದಿತ್ತು.
2011ರ ಮಾರ್ಚ್ 20ರಂದು ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಭಾರತ 112 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್ಗಿಳಿದ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಭಾರತವನ್ನು ಸುಭದ್ರ ಸ್ಥಿತಿಗೆ ತಂದಿದ್ದರು. ಕೊಹ್ಲಿ ಅರ್ಧ ಶತಕ ಗಳಿಸಿ ವಿಕೆಟ್ ಒಪ್ಪಿಸಿದ್ರೆ, ಯುವರಾಜ್ ಸಿಂಗ್ ಬರೋಬ್ಬರಿ 113 ರನ್ ಗಳಿಸಿದಲ್ಲದೆ ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ಭಾರತಕ್ಕೆ ಆಸರೆಯಾಗಿದ್ರು.
ಇದೇ ಪಂದ್ಯದಲ್ಲಿ ಯುವರಾಜ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಅನಾರೋಗ್ಯದ ಕಾರಣ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ಅಲ್ಲದೆ ಹಲವು ಬಾರಿ ರಕ್ತ ವಾಂತಿ ಮಾಡಿಕೊಂಡಿದ್ದರು, ಬಳಿಕ ಚೇತರಿಸಿಕೊಂಡು ದೇಶಕ್ಕಾಗಿ ಬ್ಯಾಟ್ ಹಿಡಿದು ಶತಕ ಸಿಡಿಸಿದ್ದರು. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯ ಮರೆಯಲಾಗದ ಹೊಸ ಅಧ್ಯಾಯ ಬರೆದಿತ್ತು.