ಮುಂಬೈ: ಭಾರತದಲ್ಲಿ ಮಹಿಳಾ ಕ್ರಿಕೆಟ್ನ ಯಶಸ್ಸಿನ ಹಿಂದೆ ಮಿಥಾಲಿ ರಾಜ್, ಅಂಜುಮ್ ಚೋಪ್ರಾ, ಜೂಲಾ ಗೋಸ್ವಾಮಿ ಅಂತಹ ಬಹಳಷ್ಟು ಮಹಿಳಾ ಕ್ರಿಕೆಟಿಗರ ಸಾಕಷ್ಟು ಪರಿಶ್ರಮವಿದೆ. ಆದರೆ ಇಂದು ಪುರುಷರ ಕ್ರಿಕೆಟ್ ಪಂದ್ಯಗಳಂತೆ ಮಹಿಳಾ ಕ್ರಿಕೆಟ್ಗೆ ಪ್ರಾಮುಖ್ಯತೆ ನೀಡುವಂತೆ ಮಾಡಿದ್ದು ಪಂಜಾಬ್ನ ಹರ್ಮನ್ ಪ್ರೀತ್ ಕೌರ್ ಅವರ ಆ ಒಂದು ಇನ್ನಿಂಗ್ಸ್ ಎಂದರೇ ತಪ್ಪಾಗಲಾರದು.
ಹರ್ಮನ್ ಪ್ರೀತ್ ಕೌರ್ ಅವರು 2017ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡಿಸಿದ್ದ 171 ರನ್ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳು ಮಹಿಳಾ ಕ್ರಿಕೆಟ್ ಪರ ನಿಲ್ಲಲು ನೆರವಾಯಿತು ಎಂದರೆ ತಪ್ಪಾಗಲಾರದು. ಅದು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ಹರ್ಮನ್ ಪ್ರೀತ್ ಕೌರ್ ಸಿಡಿಸಿದ್ದ ಆ ಸ್ಫೋಟಕ ಶತಕಕ್ಕೆ 3 ವರ್ಷಗಳ ಸಂಭ್ರಮವಾಗಿದೆ.
ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಆಸ್ಟ್ರೇಲಿಯಾ ಲೀಗ್ನಲ್ಲಿ ಮಣಿಸಿತ್ತು. ಇದು ಟೂರ್ನಿಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗಿದ್ದರಿಂದ ನಂಬರ್ ಒನ್ ತಂಡವನ್ನು ಸೋಲಿಸುವುದು ಆಸಾಧ್ಯ ಎಂದೇ ಭಾವಿಸಲಾಗಿತ್ತು. ಆದರೆ ಹರ್ಮನ್ ಪ್ರೀತ್ ಕೌರ್ ಎಂಬ ಯುವ ಆಟಗಾರ್ತಿಯ ಸ್ಫೋಟಕ ಬ್ಯಾಟಿಂಗ್ ಶೈಲಿ ವಿಶ್ವ ಕ್ರಿಕೆಟ್ಅನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿತ್ತು. ಅಲ್ಲದೆ ಆ ಪಂದ್ಯ ಭಾರತದ ಮಹಿಳಾ ಕ್ರಿಕೆಟ್ ಅನ್ನು ಇತಿಹಾಸ ಪುಟ ಸೇರುವಂತೆ ಮಾಡಿತ್ತು.
ಮಳೆಯ ಕಾರಣ 42 ಓವರ್ಗಳಿಗೆ ಸೀಮಿತಗೊಳಿಸಿದ್ದ ಆ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್ 25 ನೇ ಓವರ್ನಲ್ಲಿ ತಂಡದ ಮೊತ್ತ 101ರನ್ ಆಗಿದ್ದ ವೇಳೆ ಔಟಾದರು. ಅಲ್ಲಿಯವರೆಗೆ ಮಿಥಾಲಿರಾಜ್ ನಂಬಿಕೊಂಡಿದ್ದ ತಂಡದಲ್ಲಿ ಸೋಲಿನ ಛಾಯೆ ಮೂಡಿತ್ತು. ಆದರೆ ಯುವ ಆಲ್ರೌಂಡರ್ ದೀಪ್ತಿ ಶರ್ಮಾರನ್ನು ಜೊತೆಗೂಡಿದ ಪಂಜಾಬ್ನ ಹರ್ಮನ್ ಪಂದ್ಯದ ಗತಿಯನ್ನೇ ಬದಲಾಯಿಸಿದ್ದರು. ಅದಾಗಲೇ ಬಿಗ್ಬ್ಯಾಶ್ ಲೀಗ್ನಲ್ಲಿ ಆಸ್ಟ್ರೇಲಿಯಾ ತಂಡದ ಬೌಲಿಂಗ್ ಎದುರಿಸಿದ್ದ ಅವರು ಏಕಾಂಗಿಯಾಗಿ ಆಸೀಸ್ ಬೌಲರ್ಗಳ ಸವಾಲಿಗೆ ತಮ್ಮ ಅಗ್ರೆಸಿವ್ ಬ್ಯಾಟಿಂಗ್ ಮೂಲಕ ಉತ್ತರಿಸಿದ್ದರು.
ಆರಂಭದಲ್ಲಿ 60 ಎಸೆತಗಳಿಗೆ 40 ರನ್ ಗಳಿಸಿ ನಿಧಾನಗತಿ ಬ್ಯಾಟಿಂಗ್ ನಡೆಸಿದ್ದ ಕೌರ್ ನಂತರ ಸ್ಟಂಪ್ ಔಟ್ ನಿಂದಲೂ ಬಚಾವ್ ಆಗಿದ್ದರು. ಬಳಿಕ ಸಿಕ್ಕ ಅವಕಾಶವನ್ನು ಬಳಸಿಕೊಂಡ ಕೌರ್ ಕೇವಲ 4 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಈ ಹಂತದಲ್ಲಿ ದೀಪ್ತಿ ಶರ್ಮಾರ ಗೊಂದಲದಿಂದ ಮತ್ತೊಮ್ಮೆ ಔಟ್ ಆಗುವ ಸಂಭವ ಕೂಡ ನಿರ್ಮಾಣವಾಗಿತ್ತು. ಆದ್ರೆ ಸ್ವಲ್ಪದರಲ್ಲೇ ಬಚಾವ್ ಆದ ಅವರು ಮೈದಾನದಲ್ಲೇ ದೀಪ್ತಿ ಮೇಲೆ ಸಿಟ್ಟಾಗಿ ಬೈಯ್ದ ಘಟನೆಯೂ ನಡೆದಿತ್ತು.
ಆದರೂ ಆಟದ ಕಡೆ ಮತ್ತೆ ಗಮನ ಹರಿಸಿದ ಕೌರ್ 82 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅಲ್ಲಿಯವರೆಗೆ ಅವರ ಸ್ಟ್ರೈಕ್ ರೇಟ್ 111.11 ಇತ್ತು. ಕೌರ್ 100 ರಿಂದ 150 ತಲುಪಲು ತೆಗೆದುಕೊಂಡಿದ್ದು ಕೇವಲ 17 ಎಸೆತ. ಅಲ್ಲದೆ ನಂತರದ 8 ಎಸೆತಗಳಲ್ಲಿ 21 ರನ್ ಸಿಡಿಸಿದ್ದರು. ಒಟ್ಟಾರೆ 115 ಎಸೆತಗಳಲ್ಲಿ ಭರ್ಜರಿ 7 ಸಿಕ್ಸರ್ ಹಾಗೂ 20 ಬೌಂಡರಿ ಸಹಿತ 171 ರನ್ ಸಿಡಿಸಿದ್ದರು.
ಈ ಪಂದ್ಯದಲ್ಲಿ ಭಾರತ 42 ಓವರ್ಗಳಲ್ಲಿ 281 ರನ್ ಗಳಿಸಿದರೆ, ಆಸ್ಟ್ರೇಲಿಯಾ 245 ರನ್ ಗಳಿಸಲಷ್ಟೇ ಶಕ್ತವಾಗಿ 36 ರನ್ಗಳ ಸೋಲು ಕಂಡಿತು. ಆದರೆ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್ಗಳ ಸೋಲು ಕಾಣುವ ಮೂಲಕ ಭಾರತ ನಿರಾಶೆ ಅನುಭವಿಸಿತು.