ನವದೆಹಲಿ: ಒಂದು ಕಾಲದಲ್ಲಿ ಭವಿಷ್ಯದ ಕೊಹ್ಲಿ ಎಂದೇ ಬಿಂಬಿತವಾಗಿದ್ದ ಭಾರತಕ್ಕೆ 2012 ರ ಅಂಡರ್ 19 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಉನ್ಮುಕ್ತ್ ಚಾಂದ್ ತಮ್ಮ ಗತಕಾಲದ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಚಾಂದ್ ತಮ್ಮ ಅಂಡರ್ 19 ವಿಶ್ವಕಪ್ ವಿಜಯದ ಬಗ್ಗೆ ಮಾತನಾಡುತ್ತಾ, ಖಂಡಿತವಾಗಿಯೂ ಯಾವುದೇ ಅಂಡರ್ 19 ಆಟಗಾರನಿಗೂ ವಿಶ್ವಕಪ್ ಅತಿ ಮುಖ್ಯವಾದ ವಿಷಯವಾಗಿರುತ್ತದೆ. ಕೆಲವು ವರ್ಷಗಳ ಕಠಿಣ ಪರಿಶ್ರಮ-ಜೂನಿಯರ್ ಕ್ರಿಕೆಟ್ ಆಡಿದವರಿಗೆ ಹಾಗೂ 16 ವರ್ಷದೊಳಗಿನವರಿಗೆ ಜೂನಿಯರ್ ವಿಶ್ವಕಪ್ ಅರ್ಹತೆ ಕೂಡ ಮಹತ್ವದ್ದಾಗಿರುತ್ತದೆ. ಎಲ್ಲಾ ಸೀನಿಯರ್ ಆಟಗಾರರಿಗೂ ವಿಶ್ವಕಪ್ ಗೆಲ್ಲುವ ಕನಸು ಹೇಗೋ, 19 ವರ್ಷದೊಳಗಿನವರಿಗೆ ಜೂನಿಯರ್ ವಿಶ್ವಕಪ್ ಎತ್ತಿ ಹಿಡಿಯುವುದು ಸಹ ದೊಡ್ಡ ಕನಸಾಗಿರುತ್ತದ ಎಂದಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯಷ್ಟೇ ವಿರಾಟ್ ಬಯ್ಯಾ ತಂಡವನ್ನು ಮುನ್ನಡೆಸುವುದು ಮತ್ತು ವಿಶ್ವಕಪ್ ಗೆದ್ದಿದ್ದನ್ನು ನಾನು ನೋಡಿದ್ದೆ. ಅದು ನನ್ನ ಮೇಲೆ ದೊಡ್ಡ ಪ್ರಭಾವ ಬೀರಿತ್ತು. ಆದರೆ ನಮ್ಮಿಬ್ಬರ ಕಥೆಗಳು ವಿಭಿನ್ನವಾಗಿವೆ ಎಂದು ನನಗೆ ತಿಳಿದಿತ್ತು. ಎಲ್ಲರಂತೆ ನಾನು ಸ್ವಾಭಾವಿಕವಾಗಿ ಟೀಮ್ ಇಂಡಿಯಾ ಪರ ಆಡುವ ಬಯಕೆಗಿಂತ ಅಂಡರ್ 19 ವಿಶ್ವಕಪ್ ಗೆಲ್ಲುವುದರ ಕಡೆಗೆ ಹೆಚ್ಚು ಗಮನ ನೀಡಿದ್ದೆ ಎಂದು 2012 ಅಂಡರ್ 19 ವಿಶ್ವಕಪ್ ವಿಜೇತ ತಂಡದ ನಾಯಕ ಹೇಳಿದ್ದಾರೆ.
ಚಾಂದ್ 67 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 3,379 ರನ್ ಗಳಿಸಿದ್ದಾರೆ. ಅವರು 2012 ವಿಶ್ವಕಪ್ ನಂತರ ಭಾರತ ಎ ತಂಡದ ನಾಯಕನಾಗಿ ಉತ್ತಮವಾಗಿ ರನ್ ಗಳಿಸಿದರೂ ಟೀಮ್ ಇಂಡಿಯಾದಿಂದ ಕರೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಬಳಿಕ ನನಗೆ ಅವಕಾಶಗಳು ಸಿಗಲಿಲ್ಲ ಎಂದಲ್ಲ. ನಾನು ಇಂಡಿಯಾ ಎ ಪರ ಆಡಿದ್ದೇನೆ. ಮತ್ತು 2016ರ ವರೆಗೆ ತಂಡದ ನಾಯಕನಾಗಿದ್ದೆ, ಉತ್ತಮವಾಗಿ ರನ್ ಗಳಿಸುತ್ತಿದ್ದೆ. ಕೆಲವು ಬಾರಿ ನನಗೆ ಸಿದ್ಧರಾಗಿರಿ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಆಯ್ಕೆ ಸಮಿತಿಯಿಂದಲೂ ಕರೆ ಬಂದಿತ್ತು ಎಂದು ಉನ್ಮಕ್ತ್ ಹೇಳಿದ್ದಾರೆ.
ಆದರೆ ಆ ಸಂದರ್ಭದಲ್ಲಿ ಭಾರತ ತಂಡದಲ್ಲಿನ ಸಂಯೋಜನೆ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ನಾನು ಉತ್ತಮವಾಗಿ ಆಡುತ್ತಿದ್ದ ಸಂದರ್ಭದಲ್ಲಿ ವಿರೂ ಭಯ್ಯಾ ಹಾಗೂ ಗೌತಮ್ ಭಯ್ಯಾ ಅವರು ಭಾರತಕ್ಕಾಗಿ ಅದ್ಭುತವಾಗಿ ಆಡುತ್ತಿದ್ದುದು ನನಗೆ ಬಹಳ ಸ್ಪಷ್ಷವಾಗಿ ನೆನಪಿದೆ. ಆ ನಂತರ ಭಾರತ ತಂಡಕ್ಕೆ ಆರಂಭಿಕರ ಕೊರತೆಯಾದ ಅವಧಿಯಲ್ಲಿ ನಾನು ಫಾರ್ಮ್ ಕಳೆದುಕೊಂಡಿದ್ದೆ. ಈ ವಿಚಾರ ಕೂಡ ನನಗೆ ಮಹತ್ವದ್ದಾಗಿದೆ ಎಂದು ಚಾಂದ್ ತಿಳಿಸಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯದಿದ್ದರೂ ನಾನು ನನ್ನ ಕ್ರಿಕೆಟ್ ಪಯಣದಲ್ಲಿ ಉತ್ತಮ ಅನುಭವ ಪಡೆದಿದ್ದೇನೆ ಎಂದು ಚಾಂದ್ ಹೇಳಿಕೊಂಡಿದ್ದಾರೆ.