ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಕ್ರಿಕೆಟ್ ಚಟುವಟಿಕೆಗಳ ಸ್ಥಗಿತದಿಂದ ಆರ್ಥಿಕ ನಷ್ಟ ಎದುರಿಸುತ್ತಿದ್ದರೂ ಆಟಗಾರರ ವೇತನ ಕಡಿತಗೊಳಿಸುವ ಬಗ್ಗೆ ಚರ್ಚಿಸಿಲ್ಲ ಎಂದು ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, 'ನಾವು ವೇತನ ಕಡಿತದ ಬಗ್ಗೆ ಚರ್ಚಿಸುತ್ತಿಲ್ಲ. ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ ಹೆಚ್ಚು ನಷ್ಟವಾಗಲಿದೆ. ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಆಟಗಾರರ ವೇತನ ಕಡಿತದ ಬಗ್ಗೆ ಇಲ್ಲಿಯವರೆಗೆ ತೀರ್ಮಾನ ಮಾಡಿಲ್ಲ. ಸಮಯ ಬಂದಾಗ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
'ನಾವು ಯಾವ ವೆಚ್ಚವನ್ನು ಕಡಿತಗೊಳಿಸಬಹುದು ಅಥವಾ ಯಾವುದನ್ನು ಉಳಿತಾಯ ಮಾಡಬಹುದು ಎಂಬ ಬಗ್ಗೆ ಗಮನ ಹರಿಸಿದ್ದೇವೆ. ಆದಾಯದ ನಷ್ಟದ ನಡುವೆಯೂ ವೆಚ್ಚ ಕಡಿತಗೊಳಿಸಿ ಮತ್ತು ಆದಾಯ ಸಂಗ್ರಹ ಯೋಜನೆಗಳನ್ನು ಪರಿಶೀಲಿಸುತ್ತಿದ್ದೇವೆ' ಎಂದು ಧುಮಾಲ್ ಹೇಳಿದ್ದಾರೆ.
ಆಟಗಾರರ ಆದಯಕ್ಕೆ ಸದ್ಯಕ್ಕೆ ಕತ್ತರಿ ಇಲ್ಲ. ಆದರೆ ನೌಕರರು ಅಥವಾ ಅಧಿಕಾರಿಗಳಿಗೆ ಸಂಬಂಧಪಟ್ಟ ವೆಚ್ಚ ಕಡಿತದ ಬಗ್ಗೆ ಯೋಚಿಸುತ್ತಿದ್ದೇವೆ. ಪ್ರಯಾಣಕ್ಕೆ ಸಂಬಂಧಿಸಿದಂತೆ ವೆಚ್ಚವನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ವಸತಿ ಸೌಕರ್ಯ ಸೇರಿದಂತೆ ನೌಕರರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.