ದುಬೈ: ಮಹೇಂದ್ರ ಸಿಂಗ್ ಧೋನಿ ಅವರಂತೆ ಆಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅವರಂತೆ ಆಡಲು ಯಾರೂ ಪ್ರಯತ್ನವನ್ನೂ ಕೂಡ ಮಾಡಬಾರದು ಎಂದು 13ನೇ ಆವೃತ್ತಿಯ ಐಪಿಎಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಸಂಜು ಸಾಮ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ಪಂದ್ಯಗಳಲ್ಲಿ 74 ಮತ್ತು 85 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಜು ಸಾಮ್ಸನ್ರನ್ನು ಕೆಲವು ದಿಗ್ಗಜರು ಭವಿಷ್ಯದ ಧೋನಿ ಎಂದು ಹೋಲಿಕೆ ಮಾಡುತ್ತಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾಮ್ಸನ್ ಧೋನಿಯಂತೆ ಆಡಲು ಸಾಧ್ಯವಿಲ್ಲ. ಅವರನ್ನು ಅನುಕರಣೆ ಮಾಡಲು ಯಾರೂ ಪ್ರಯತ್ನಿಸಬಾರದು ಎಂದು ಹೇಳಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 224 ರನ್ಗಳ ದಾಖಲೆಯ ರನ್ ಚೇಸ್ ಮಾಡಲು ಸಂಜು ಸಾಮ್ಸನ್ ನೆರವಾಗಿದ್ದರು. ಈ ಪಂದ್ಯ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಶಶಿ ತರೂರ್ ಟ್ವೀಟ್ ಮೂಲಕ ಸಂಜು ಸಾಮ್ಸನ್ರನ್ನು ಭವಿಷ್ಯದ ಧೋನಿ ಎಂದು ಹೋಲಿಕೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗಂಭೀರ್ ಇದನ್ನು ಅಲ್ಲಗೆಳೆದು, ಸಂಜು ಅವರಂತೆಯೇ ಇರಲಿ, ಬೇರೆ ಯಾರಂತೆಯೂ ಆಗುವುದು ಬೇಡ ಎಂದಿದ್ದರು.
"ಖಚಿತವಾಗಿ ಹೇಳುತ್ತೇನೆ ಧೋನಿಯಂತೆ ಆಡಲು ಯಾರಿಂದಲೂ ಸಾಧ್ಯವಿಲ್ಲ, ಯಾರೊಬ್ಬರೂ ಅವರಂತೆ ಆಡಲು ಪ್ರಯತ್ನ ಕೂಡ ಮಾಡಬಾರದು. ಎಂಎಸ್ ಧೋನಿಯಂತೆ ಆಡುವುದು ಅಷ್ಟು ಸುಲಭವಲ್ಲ. ಹಾಗಾಗಿ, ಅದನ್ನು ಬಿಟ್ಟುಬಿಡಿ. ನಾನು ಎಂದಿಗೂ ಎಂಎಸ್ ಧೋನಿಯವರಂತೆ ಆಡಬೇಕೆಂದು ಆಲೋಚನೆ ಮಾಡಿಲ್ಲ. ಅವರು ಭಾರತೀಯ ಕ್ರಿಕೆಟ್ ಹಾಗೂ ಕ್ರಿಕೆಟ್ ಆಟದ ಲೆಜೆಂಡ್ ಆಗಿದ್ದಾರೆ " ಎಂದು ಸ್ಯಾಮ್ಸನ್ ಹೇಳಿದ್ದಾರೆ.
ಮಾತು ಮುಂದುವರಿಸಿ "ನಾನು ನನ್ನ ಆಟದ ಕಡೆಗೆ ಗಮನ ನೀಡುತ್ತೇನೆ. ತಂಡಕ್ಕಾಗಿ ನಾನು ಏನು ಮಾಡಬೇಕು, ನನ್ನ ಶ್ರೇಷ್ಠ ಪ್ರದರ್ಶನ ಹೊರತರಲು ಏನು ಮಾಡಬೇಕು. ಪಂದ್ಯಗಳನ್ನು ಹೇಗೆ ಗೆದ್ದು ಕೊಡಬೇಕು ಎಂಬುದರ ಕಡೆಗೆ ಮಾತ್ರ ನನ್ನ ಆಲೋಚನೆಯಿರುತ್ತದೆ" ಎಂದಿದ್ದಾರೆ.