ಚೆನ್ನೈ: ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಬಿಸಿಸಿಐ 2020ರ ಆಟಗಾರರ ವಾರ್ಷಿಕ ಗುತ್ತಿಗೆಯಿಂದ ಕೈಬಿಟ್ಟಿದೆ. ಇದರಿಂದ ಧೋನಿ ಕ್ರಿಕೆಟ್ ಭವಿಷ್ಯ ಅಂತ್ಯವಾಯಿತು ಎಂದುಕೊಂಡಿದ್ದ ಆಭಿಮಾನಿಗಳಿಗೆ ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಸಿಹಿ ಸುದ್ದಿ ನೀಡಿದ್ದಾರೆ.
ಭಾರತ ಕ್ರಿಕೆಟ್ ತಂಡದಿಂದ 2019ರ ವಿಶ್ವಕಪ್ನಿಂದ ದೂರ ಉಳಿದಿರುವ ಧೋನಿಯನ್ನು ನಿಯಮದನ್ವಯ ವಾರ್ಷಿಕ ಗುತ್ತಿಗೆಯಿಂದ ಬಿಸಿಸಿಐ ಕೈಬಿಟ್ಟಿತ್ತು. ಸುಮಾರು ಏಳೆಂಟು ತಿಂಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿರುವ ಧೋನಿ ಭವಿಷ್ಯದಲ್ಲಿ ಭಾರತ ತಂಡಕ್ಕೆ ಮರಳುವುದು ಅಸಾಧ್ಯ ಎಂದೇ ಚರ್ಚೆಯಾಗುತ್ತಿತ್ತು. ಆದರೆ ಧೋನಿ ಇನ್ನೂ ಎರಡು ಐಪಿಎಲ್ಗಳಲ್ಲಿ ಆಡಲಿದ್ದಾರೆ ಎಂದು ಸಿಎಸ್ಕೆ ಮಾಲಿಕ ಎನ್. ಶ್ರೀನಿವಾಸನ್ ಖಚಿತಪಡಿಸಿದ್ದಾರೆ.
"ಧೋನಿ ಯಾವಾಗ ನಿವೃತ್ತಿ ಘೋಷಿಸುತ್ತಾರೆ, ಎಷ್ಟು ದಿನ ಆಡಲಿದ್ದಾರೆ, ಇತ್ಯಾದಿಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅವರಿನ್ನೂ ಆಡಲಿದ್ದಾರೆ. ಈ ಬಗ್ಗೆ ನಾನು ಖಚಿತವಾಗಿ ಹೇಳಬಲ್ಲೆ. ಮುಂದಿನ ವರ್ಷ ಅವರು ಹರಾಜಿಗೆ ಹೋದರೂ ನಾವೇ ರೀಟೈನ್ ಮಾಡಿಕೊಳ್ಳುತ್ತೇವೆ" ಎಂದು ಖಾಸಗಿ ಸಮಾರಂಭದಲ್ಲಿ ಮಾತನಾಡುತ್ತಾ ಶ್ರೀನಿವಾಸನ್ ಹೇಳಿದರು.
ಧೋನಿ 2008ರಿಂದ ಇಲ್ಲಿಯವರೆಗೆ (ನಿಷೇಧವಾಗಿದ್ದ 2 ವರ್ಷಗಳನ್ನು ಬಿಟ್ಟು) ಐಪಿಎಲ್‌ನ ಎಲ್ಲಾ ಆವೃತ್ತಿಗಳಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಪರವೇ ಆಡಿದ್ದಾರೆ. 10 ಆವೃತ್ತಿಗಳಲ್ಲಿ ಚೆನ್ನೈ ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಮಾಹಿಗೆ ಸಲ್ಲಬೇಕು.