ನವದೆಹಲಿ : 2008ರ ಅಂಡರ್ 19 ವಿಶ್ವಕಪ್‌ಗೆ ಇನ್ನೂ ಕೆಲವೇ ದಿನಗಳಿರುವ ಸಂದರ್ಭದಲ್ಲಿ ತನ್ನನ್ನು ನಾಯಕನನ್ನಾಗಿ ನೇಮಿಸಲಾಗಿತ್ತು ಎಂದು ವಿರಾಟ್ ಕೊಹ್ಲಿ ಆ ದಿನಗಳನ್ನ ಸ್ಮರಿಸಿಕೊಂಡಿದ್ದಾರೆ. ಭಾರತ ತಂಡದ ನಾಯಕ ಕೊಹ್ಲಿ ತಮ್ಮ ಸಹ ಆಟಗಾರ ರವಿಚಂದ್ರನ್ ಜೊತೆ ನಡೆಸಿ ಇನ್ಸ್ಟಾಗ್ರಾಮ್ ಲೈವ್ ಚಾಟ್ ವೇಳೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಜೊತೆಗೆ ಅವರು ಮುಂದೊಂದು ದಿನ ಟೀಂ ಇಂಡಿಯಾದ ನಾಯಕನಾಗುತ್ತೇನೆಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ವಂತೆ. ಅಂಡರ್-19 ತಂಡದ ನಾಯಕತ್ವದಿಂದ ಭಾರತ ತಂಡದ ನಾಯಕನಾಗಿ ಪರಿವರ್ತನೆಗೊಂಡ ಬಗ್ಗೆ ಕೇಳಿದಾಗ ಕೊಹ್ಲಿ ತಾನು ನಾಯಕನಾಗಿ ಆಯ್ಕೆಯಾಗಿದ್ದ ಕಥೆ ಸ್ಮರಿಸಿಕೊಂಡಿದ್ದಾರೆ.
"ನಾನು ಯಾವಾಗಲೂ ಜವಾಬ್ದಾರಿ ತೆಗೆದುಕೊಳ್ಳುಲು ಇಷ್ಟಪಡುವ ವ್ಯಕ್ತಿಯಾಗಿದ್ದೆ. ಇದೇ ಸಂದರ್ಭದಲ್ಲಿ ಅಂಡರ್-19 ವಿಶ್ವಕಪ್ ಕೂಡ ಸಂಭವಿಸಿತ್ತು. ಆದರೆ, ನಾನು ಅಂಡರ್-19 ವಿಶ್ವಕಪ್ ಪ್ರವಾಸಕ್ಕೆ ತೆರಳುವ ಒಂದು ಗಂಟೆಯವರೆಗೆ ನಾನೇ ಟೀಂ ಇಂಡಿಯಾ ನಾಯಕ ಎಂದು ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ನಾವು ದಕ್ಷಿಣ ಆಫ್ರಿಕಾಗೆ ತೆರಳಿದ ನಂತರ ನಾವು ಗೆದ್ದ ವಿಶ್ವಕಪ್ನ ನಾಯಕತ್ವವನ್ನು ನನಗೆ ನೀಡಲಾಗಿತ್ತು" ಎಂದು ಕೊಹ್ಲಿ ತಿಳಿಸಿದ್ದಾರೆ.
ಅದಕ್ಕೂ ಮುನ್ನ ನಾನು ನನ್ನ ಕ್ಲಬ್ನ ಹಾಗೂ ರಾಜ್ಯ ತಂಡಗಳ ನಾಯಕನಾಗಿದ್ದೆ. ಒಂದು ಅವೃತ್ತಿಯಲ್ಲಿ ಸೀನಿಯರ್ಗಳಿದ್ದ ರಣಜಿ ತಂಡಕ್ಕೆ ನಾಯಕನಾಗಿದ್ದೆ. ಅದಕ್ಕಾಗಿ ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದರೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ನಿಜ ಹೇಳುತ್ತೇನೆ, ಭಾರತ ಸೀನಿಯರ್ ತಂಡದ ನಾಯಕನಾಗುತ್ತೇನೆಂದು ನನ್ನ ಕನಸಿನಲ್ಲಿಯೂ ಆಲೋಚಿಸಿರಲಿಲ್ಲ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ನಾನು ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಸಂದರ್ಭದಲ್ಲಿ ನಾಯಕರಾಗಿದ್ದ ಧೋನಿ ಅವರ ಜೊತೆ ಫೀಲ್ಡ್ ಸೆಟ್ಟಿಂಗ್ ಬಗ್ಗೆ ಸದಾ ಚರ್ಚೆ ನಡೆಸುತ್ತಿದ್ದೆ. ಸದಾ ಅವರ ಆಲೋಚನೆಗಳನ್ನು ಗಮನಿಸಿತ್ತಿದ್ದೆ. ಸದಾ ಫೀಲ್ಡ್ನಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ನಾನು ನಾಯಕನಾಗುವುದರಲ್ಲಿ ಧೋನಿ ಪಾತ್ರ ಹೆಚ್ಚಿನದ್ದಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ಕೊರೊನಾ ವೈರಸ್‌ಗೆ ಲಸಿಕೆ ಬರುವವರೆಗೂ ಆಟಗಾರರು ಹೊಸ ರೀತಿ ಅಭ್ಯಾಸ ಮಾಡುವ ಅಗತ್ಯವಿದೆ ಎಂದು ಬಲಗೈ ಬ್ಯಾಟ್ಸ್ಮನ್ ಕೊಹ್ಲಿ ಹೇಳಿದ್ದಾರೆ.