ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟಿ-20, ಏಕದಿನ ಸರಣಿ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾದ ಕೆಲ ಆಟಗಾರರು ಈಗಾಗಲೇ ವೆಸ್ಟ್ ಇಂಡೀಸ್ನಿಂದ ಭಾರತಕ್ಕೆ ಆಗಮಿಸಿದ್ದಾರೆ. ಇದರ ಮಧ್ಯೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ನವದೀಪ್ ಸೈನಿ ಇದೀಗ ಟೀಂ ಇಂಡಿಯಾ ಟೆಸ್ಟ್ ತಂಡದೊಂದಿಗೆ ವೆಸ್ಟ್ ಇಂಡೀಸ್ನಲ್ಲೇ ಉಳಿದುಕೊಂಡಿದ್ದಾರೆ.
ಟಿ-20 ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮೊದಲ ಪಂದ್ಯದಲ್ಲೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡಿದ್ದ ಬಲಗೈ ವೇಗದ ಬೌಲರ್ ಸೈನಿ, ನಂತರದ ಪಂದ್ಯದಲ್ಲೂ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಅವರ ಬೌಲಿಂಗ್ ಶೈಲಿಗೆ ಬಿಸಿಸಿಐ ಫಿದಾ ಆಗಿದ್ದು, ಇದೀಗ ಟೆಸ್ಟ್ ತಂಡದೊಂದಿಗೆ ವೆಸ್ಟ್ ಇಂಡೀಸ್ನಲ್ಲೇ ಉಳಿಸಿಕೊಂಡು ಅವರನ್ನ ನೆಟ್ ಬೌಲರ್ ಆಗಿ ಬಳಕೆ ಮಾಡಿಕೊಳ್ಳಲು ತಿರ್ಮಾನಿಸಿದೆ.
ಈಗಾಗಲೇ ಇಂಗ್ಲೆಂಡ್ನಲ್ಲಿ ಟೀಂ ಇಂಡಿಯಾದ ವಿಶ್ವಕಪ್ ತಂಡಕ್ಕೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿರುವ ಸೈನಿ, ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಆಯ್ಕೆ ಸಮಿತಿ ಅವರನ್ನ ಮುಂದಿನ ದಿನಗಳಲ್ಲಿ ಏಕದಿನ ಹಾಗೂ ಟೆಸ್ಟ್ ಪಂದ್ಯಕ್ಕೂ ತೆಗೆದುಕೊಳ್ಳಲು ಉತ್ಸುಕವಾಗಿರುವ ಕಾರಣ, ಅವರಿಗೆ ಈ ಚಾನ್ಸ್ ನೀಡಲಾಗಿದೆ. ವೆಸ್ಟ್ ಇಂಡೀಸ್ ಎ ತಂಡದೊಂದಿಗೆ ನಡೆದ ಅಭ್ಯಾಸ ಪಂದ್ಯದಲ್ಲಿ ಸೈನಿ ಇಶಾಂತ್ ಶರ್ಮಾ ಬದಲಿಗೆ ಆರು ಓವರ್ ಬೌಲಿಂಗ್ ಸಹ ಮಾಡಿದ್ದಾರೆ.
43 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಸೈನಿ 120 ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ. ಇನ್ನು ಐಪಿಎಲ್ನಲ್ಲೂ ಅವರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.